ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುವುದು ಬಿಜೆಪಿಗೆ ಬೇಕು, ಅವರ ಸಮಸ್ಯೆಗಳನ್ನು ಬಗೆಹರಿಸುವುದಲ್ಲ: ಕುಮಾರಸ್ವಾಮಿ
ದಿ ಶೋ ಮಸ್ಟ್ ಎಂಡ್ ಎನ್ನುವ ಹಾಗೆ ಬಿಜೆಪಿಯ ರಾಜ್ಯಭಾರವೂ ಮುಂದೊಂದು ದಿನ ಕೊನೆಗೊಳ್ಳುತ್ತದೆ. ಅದು ಯಾವಾಗ ಅಂತ ಹೇಳಲಾಗದು ಅದರೆ ಕೊನೆಗೊಳ್ಳೋದು ಮಾತ್ರ ನಿಶ್ಚಿತ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯರು (HD Kumaraswamy) ಶನಿವಾರ ರಾಮನಗರಕ್ಕೆ (Ramanagara) ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಭಗವದ್ಗೀತೆಯನ್ನು (The Bhagavad Gita) ಪಠ್ಯಪುಸ್ತಕಗಳ ಭಾಗವನ್ನಾಗಿ ಮಾಡುಬಯಸಿರುವ ಚಿಂತನೆಗೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡರು. ದೇಶವನ್ನು ಮತ್ತು ಜನರನ್ನು ಭಾವನಾತ್ಮಕವಾಗಿ ದಾರಿತಪ್ಪಿಸುವುದನ್ನು ಬಿಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರ ಬೇರೇನೂ ಮಾಡುತ್ತಿಲ್ಲ. ಸರ್ಕಾರಗಳ ಎದುರು ನೂರಾರು ಸಮಸ್ಯೆಗಳಿವೆ. ಅವುಗಳ ಕಡೆ ಗಮನ ಹರಿಸುವುದು ಸರ್ಕಾರಕ್ಕೆ ಬೇಕಿಲ್ಲ ಎಂದು ಹೇಳಿದ ಕುಮಾರಸ್ವಾಮಿ ಅವರು ತಾವು ಈಗ ಓದುತ್ತಿರುವ ಪುಸ್ತಕವೊಂದರ ಬಗ್ಗೆ ಮಾತಾಡಿದರು.
ಆ ಪುಸ್ತಕದ ಆರಂಭದಲ್ಲೇ ನಾನ್ಯಾರು, ಎಲ್ಲಿಂದ ಬಂದೆ ಮತ್ತು ಅಂತಿಮವಾಗಿ ಎಲ್ಲಿಗೆ ಹೋಗುವೆ ಎಂಬ ಮೂಲಭೂತ ಪ್ರಶ್ನೆಗಳಿವೆಯಂತೆ. ಭೂಮಿ ಹೇಗೆ ಸೃಷ್ಟಿಯಾಯಿತು, ಮಾನವನ ಹುಟ್ಟು ಹೇಗೆ ಶುರುವಾಯಿತು ಮೊದಲಾದವುಗಳ ಬಗ್ಗೆ ಚರ್ಚೆ ಇದೆ ಎಂದು ಹೇಳುವ ಅವರು ಲೋಕದಲ್ಲಿ ಯಾವುದೂ ಶಾಶ್ವತವಲ್ಲ. ರಾಜಮಹಾರಾಜರೆಲ್ಲ ಅಳಿದು ಹೋದ ಹಾಗೆ, ಬಿಜೆಪಿ ಆಳ್ವಿಕೆಯೂ ಕೊನೆಗೊಳ್ಳುತ್ತದೆ, ಅದಕ್ಕಾಗಿ ನಾವು ಕಾಯಬೇಕಿದೆ ಎಂದು ಅವರು ಹೇಳಿದರು.
ಜನ ಸಾಯುತ್ತಿರುವ ಬಗ್ಗೆ ಸರ್ಕಾರಕ್ಕೆ ಚಿಂತೆಯಿಲ್ಲ, ಅವರ ಬಡತನ ಮತ್ತು ಹಸಿವಿನ ಚಿಂತೆಯಿಲ್ಲ, ಯುವಕರಿಗೆ ನೌಕರಿಗಳನ್ನು ಒದಗಿಸುವ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಈ ಸರ್ಕಾರಗಳಿಗೆ ಅಧಿಕಾರ ಮಾತ್ರ ಬೇಕು. ಅದನ್ನು ಪಡೆಯಲು ಅವರು ಜನರ ಭಾವನೆಗಳೊಂದಿಗೆ ಅಟವಾಡುತ್ತಾರೆ, ಅವರನ್ನು ಭಾವನಾತ್ಮಕವಾಗಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ದಿ ಶೋ ಮಸ್ಟ್ ಎಂಡ್ ಎನ್ನುವ ಹಾಗೆ ಬಿಜೆಪಿಯ ರಾಜ್ಯಭಾರವೂ ಮುಂದೊಂದು ದಿನ ಕೊನೆಗೊಳ್ಳುತ್ತದೆ. ಅದು ಯಾವಾಗ ಅಂತ ಹೇಳಲಾಗದು ಅದರೆ ಕೊನೆಗೊಳ್ಳೋದು ಮಾತ್ರ ನಿಶ್ಚಿತ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Viral Video: ಲೋಕದ ಚಿಂತೆ ನನಗ್ಯಾಕೆ!; ಬಸ್ ಸ್ಟಾಪ್ನಲ್ಲೇ ನಿಂತು ಡ್ಯಾನ್ಸ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್