ಸೋಶಿಯಲ್​​ ಮೀಡಿಯಾ ಪೋಸ್ಟ್‌ ವಿವಾದ: ಸ್ಪಷ್ಟನೆ ಕೊಟ್ಟ ಕಾಂಗ್ರೆಸ್​​ MLC ಚನ್ನರಾಜ್ ಹಟ್ಟಿಹೊಳಿ

Updated on: Dec 09, 2025 | 12:25 PM

ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಪೋಸ್ಟ್ ಮಾಡಿರೋದು ಭಾರಿ ವಿವಾದಕ್ಕೆ ಕಾರಣವಾಗಿದೆ. ಆ ಬಳಿಕ ಉಪಮುಖ್ಯಮಂತ್ರಿ ಎಂದು ಪೋಸ್ಟ್​​ ತಿದ್ದುಪಡಿ ಮಾಡಲಾಗಿದ್ದು, ಇದು ಹ್ಯಾಂಡ್ಲರ್ ಮಾಡಿದ ತಪ್ಪೆಂದು ಚನ್ನರಾಜ್ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ-ಡಿಸಿಎಂ ನಡುವಿನ ಅಧಿಕಾರ ಹಂಚಿಕೆಯ ಕುರಿತು ನಡೆಯುತ್ತಿರುವ ಹಗ್ಗಜಗ್ಗಾಟದ ಮಧ್ಯೆ ಈ ಘಟನೆ ಹೊಸ ಚರ್ಚೆ ಹುಟ್ಟುಹಾಕಿದೆ.

ಬೆಳಗಾವಿ, ಡಿಸೆಂಬರ್​ 09: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಮಾಡಿದ್ದ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಡಿಕೆಶಿ ಅವರನ್ನು ಸ್ವಾಗತಿಸುವ ಸಂದರ್ಭ ಮಾಡಿದ್ದ ಈ ಪೋಸ್ಟ್​​​ ವಿಧಾನ ಸಭೆಯಲ್ಲೂ ಸದ್ದು ಮಾಡಿದೆ. ಮೊದಲು, ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಎಂದು ಪೋಸ್ಟ್ ಮಾಡಲಾಗಿತ್ತು. ಈ ವಿಚಾರ ಸುದ್ದಿ ಆಗುತ್ತಿದ್ದಂತೆಯೇ, ತಕ್ಷಣವೇ ಪೋಸ್ಟ್ ಅನ್ನು ತಿದ್ದುಪಡಿ ಮಾಡಿ ಉಪಮುಖ್ಯಮಂತ್ರಿ ಎಂದು ಬದಲಾಯಿಸಲಾಗಿದೆ. ಈ ಕುರಿತು ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಪ್ರತಿಕ್ರಿಯಿಸಿದ್ದು, ಇದು ತಮ್ಮ ಸಾಮಾಜಿಕ ಜಾಲತಾಣದ ಹ್ಯಾಂಡ್ಲರ್ ಮಾಡಿದ ಟೈಪಿಂಗ್ ಎರರ್ ಎಂದು ಸ್ಪಷ್ಟಪಡಿಸಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 09, 2025 12:24 PM