PSL 2025: ಭರ್ಜರಿ ಸೆಂಚುರಿ ಸಿಡಿಸಿದ ರಿಝ್ವಾನ್: ತಂಡಕ್ಕೆ ಸೋಲು..!
PSL 2025 KRK vs MS: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ಸ್ ತಂಡದ ಪರ ನಾಯಕ ಮೊಹಮ್ಮದ್ ರಿಝ್ವಾನ್ ಶತಕ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಮುಲ್ತಾನ್ ತಂಡವು 234 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕರಾಚಿ ಕಿಂಗ್ಸ್ 19.3 ಓವರ್ಗಳಲ್ಲಿ ಗುರು ಮುಟ್ಟಿದೆ.
ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಡೆಯುತ್ತಿದ್ದರೆ, ಅತ್ತ ಪಾಕ್ನಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (PSL 2025) ಜರುಗುತ್ತಿದೆ. ಈ ಟೂರ್ನಿಯ 3ನೇ ಪಂದ್ಯದಲ್ಲಿ ಎರಡು ಭರ್ಜರಿ ಶತಕಗಳು ಮೂಡಿಬಂದಿವೆ. ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ (MS) ಹಾಗೂ ಕರಾಚಿ ಕಿಂಗ್ಸ್ (KRK) ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದ ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ಸ್ ಪರ ನಾಯಕ ಮೊಹಮ್ಮದ್ ರಿಝ್ವಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ರಿಝ್ವಾನ್ 63 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 105 ರನ್ ಬಾರಿಸಿದರು.
ಮೊಹಮ್ಮದ್ ರಿಝ್ವಾನ್ ಅವರ ಈ ಶತಕದ ನೆರವಿನಿಂದ ಮುಲ್ತಾನ್ ಸುಲ್ತಾನ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿತು.
235 ರನ್ಗಳ ಕಠಿಣ ಗುರಿ ಬೆನ್ನತ್ತಿದ ಕರಾಚಿ ಕಿಂಗ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೇಮ್ಸ್ ವಿನ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮುಲ್ತಾನ್ ಸುಲ್ತಾನ್ಸ್ ಬೌಲರ್ಗಳನ್ನು ಚೆಂಡಾಡಿಸಿದ ವಿನ್ಸ್ ಕೇವಲ 43 ಎಸೆತಗಳಲ್ಲಿ 14 ಫೋರ್ ಹಾಗೂ 4 ಸಿಕ್ಸ್ನೊಂದಿಗೆ 101 ರನ್ ಬಾರಿಸಿದರು.
ಆ ಬಳಿಕ ಬಂದ ಖುಷ್ದಿಲ್ ಶಾ 37 ಎಸೆತಗಳಲ್ಲಿ 60 ರನ್ ಚಚ್ಚಿದರು. ಈ ಮೂಲಕ ಕರಾಚಿ ಕಿಂಗ್ಸ್ ತಂಡವು 19.2 ಓವರ್ಗಳಲ್ಲಿ 236 ರನ್ ಬಾರಿಸಿ 4 ವಿಕೆಟ್ಗಳ ಜಯ ಸಾಧಿಸಿದೆ. ಇದರೊಂದಿಗೆ ಪಾಕಿಸ್ತಾನ್ ಸೂಪರ್ ಲೀಗ್ ಸೀಸನ್-10 ರಲ್ಲಿ ಮೊದಲ ಸೆಂಚುರಿ ಸಿಡಿಸಿದ ಮೊಹಮ್ಮದ್ ರಿಝ್ವಾನ್ ಅವರ ಶತಕ ವ್ಯರ್ಥವಾಗಿದೆ.