ಅಮ್ಮನ ಕೊನೆಯಾಸೆಯನ್ನು ಈ ಮಕ್ಕಳು ಈಡೇರಿಸಿರುವ ರೀತಿ ಅಪೂರ್ವ ಮತ್ತು ಅನುಕರಣೀಯವಾದದ್ದು!
ದಿವಂಗತ ಗೀತಾ ಅವರದ್ದು ಅಪ್ಪಟ ಮಾತೃಹೃದಯ. ಬೇರೆಯವರವ ಕಷ್ಟಕ್ಕೆ ಕೂಡಲೇ ಸ್ಪಂದಿಸಿ ನೆರವಾಗುವ ಉದಾರ ಮನೋಭಾವ ಅವರದ್ದಾಗಿತ್ತು.
ಹೆತ್ತಮ್ಮನ ಮೇಲಿನ ಪ್ರೀತಿ, ವಾತ್ಸಲ್ಯ, ಅಭಿಮಾನಕ್ಕಾಗಿ ಕೆಲವರು ಮಂದಿರ ನಿರ್ಮಿಸಿ, ಆಕೆಗೆ ಪ್ರತಿದಿನ ಪೂಜೆ ಸಲ್ಲಿಸುವುದನ್ನು ನಾವು ಅಪರೂಪಕ್ಕೊಮ್ಮೆ ಕೇಳುತ್ತಿರುತ್ತೇವೆಯೇ ಹೊರತು ಹಾಗೆ ನಿರ್ಮಾಣಗೊಂಡಿರುವ ಮಂದಿರವೊಂದನ್ನು ಕಣ್ಣಾರೆ ಕಂಡಿದ್ದು ಇನ್ನೂ ಅಪರೂಪ. ಆದರೆ, ಉಡುಪಿಯ ಕಾಪುವಿನಲ್ಲಿ ಹುಟ್ಟಿದರೂ ತಮ್ಮ ಬದುಕಿನ ಸುದೀರ್ಘ ಸಮಯವನ್ನು ಮುಂಬೈ ಮಹಾನಗರದಲ್ಲೇ ಕಳೆದ ಗೀತಾ ಯಾದವ್ ಪೂಜಾರಿ ಅವರ ಮಕ್ಕಳು ತಮ್ಮ ತಾಯಿಗಾಗಿ ಅವರ ತವರಿನಲ್ಲಿ ಮಂದಿರ ನಿರ್ಮಿಸಿ ತಾಯಿ ನಿಷ್ಠೆ ಮೆರೆದಿದ್ದಾರೆ. ಅಂದಹಾಗೆ, ಮಕ್ಕಳು ಅಮೃತಶಿಲೆಯಲ್ಲಿ ಕೇವಲ ಗೀತಾ ಅವರ ವಿಗ್ರಹ ಮಾತ್ರ ಕೆತ್ತಿಸಿ ಪೂಜಿಸುತ್ತಿಲ್ಲ, ಅವರ ಅಮ್ಮ, ಅಮ್ಮಮ್ಮ (ಮಕ್ಕಳ ಅಜ್ಜಿ ಮತ್ತು ಮುತ್ತಜ್ಜಿ) ಮೂರ್ತಿಗಳನ್ನೂ ಕೆತ್ತಿಸಿ ಅವರ ಎಡಬಲದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಗೀತಾ ಅವರ ಮೊದಲ ಪುಣ್ಯಸ್ಮರಣೆಯಂದು ಅಮ್ಮಂದಿರ ವಿಗ್ರಹಗಳನ್ನು ಕಾಪುವಿನಲ್ಲಿ ಪ್ರತಿಷ್ಠಾಪಿಸಲಾಗಿದೆ.
ದಿವಂಗತ ಗೀತಾ ಅವರದ್ದು ಅಪ್ಪಟ ಮಾತೃಹೃದಯ. ಬೇರೆಯವರವ ಕಷ್ಟಕ್ಕೆ ಕೂಡಲೇ ಸ್ಪಂದಿಸಿ ನೆರವಾಗುವ ಉದಾರ ಮನೋಭಾವ ಅವರದ್ದಾಗಿತ್ತು. ಬೃಹುನ್ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿದ್ದ ಗೀತಾ ತಮ್ಮ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ಬಹಳ ಶ್ರಮಿಸಿದ್ದಾರಂತೆ. ಕಳೆದ ವರ್ಷ ಮುಂಬೈ ನಗರದಲ್ಲಿ ಕೊವಿಡ್-19 ಪಿಡುಗು ತಾಂಡವ ನೃತ್ಯ ನಡೆಸಿದಾಗ ಗೀತಾ, ಒಬ್ಬ ಸೇನಾನಿಯ ಹಾಗೆ ಸೋಂಕಿತರ ನೆರವಿಗೆ ಧಾವಿಸಿ, ಅವರನ್ನು ಅಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಂತೆ. ಹೋಮ್ ಕ್ವಾರಂಟೀನ್ ಆದವರ ಮನೆಗಳಿಗೆ ಆಹಾರ ಮತ್ತು ಔಷಧಿ ತಲುಪಿಸುತ್ತಿದ್ದರು.
ಕೊವಿಡ್-19 ಇಲ್ಲದ ಸಮಯದಲ್ಲೂ ಅವರು ಹೃದಯ ಶಸ್ತ್ರಚಿಕಿತ್ಸೆ, ಕಣ್ಣಿನ ಆಪರೇಶನ್ ಮತ್ತು ಬೇರೆ ರೋಗಗಳಿಂದ ನರಳುತ್ತಾ ಅವರಲ್ಲಿಗೆ ಸಹಾಯ ಕೇಳಿ ಬಂದವರಿಗೆಲ್ಲ ನೆರವಾಗಿದ್ದಾರಂತೆ. ಮುಂಬೈ ತಮ್ಮ ಕರ್ಮಭೂಮಿಯಾಗಿದ್ದರೂ ಗೀತಾ ಯಾದವ್ ತಮ್ಮ ಬದುಕಿನ ಅಂತಿಮ ದಿನಗಳನ್ನು ತಮ್ಮ ತವರು ಕಾಪುವಿನಲ್ಲಿ ಕಳೆಯಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರಂತೆ.
ಆದರೆ ವಿಧಿಯಾಟ ಬೇರೆಯಾಗಿತ್ತು, ಕಳೆದ ವರ್ಷ ಅವರು ಮುಂಬೈ ನಗರದಲ್ಲಿ ಕೇವಲ ತಮ್ಮ 52 ನೇ ವಯಸ್ಸಿನಲ್ಲಿ ವಿಧಿವಶರಾದರು.
ಆದರೆ, ಅವರ ಅಂತಿಮ ಆಸೆಯನ್ನು ಮಕ್ಕಳು ಹೀಗೆ ನೆರವೇರಿಸಿದ್ದಾರೆ.
ಗೀತಾ ಮೊದಲ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದ, ಕಾಪು ಕ್ಷೇತ್ರದ ಮಾಜಿ ಶಾಸಕ ಮತ್ತು ಮಾಜಿ ಸಚಿವ ವಿನಯ ಕುಮಾರ ಸೊರಕೆ ಅವರು, ತಾಯಿಯ ಬಗ್ಗೆ ಗೀತಾ ಅವರ ಮಕ್ಕಳು ಇಟ್ಟುಕೊಂಡಿರುವ ಪ್ರೀತಿ ಬೇರೆಯವರಿಗೂ ಮಾದರಿಯಾಗಲಿ ಎಂದು ಹೇಳಿದರು.
ಇದನ್ನೂ ಓದಿ: Viral Video: ಎರಡು ವಿಮಾನಗಳು ಪರಸ್ಪರ ಡಿಕ್ಕಿ, ಪ್ರಯಾಣಿಕರ ಜತೆ ಕೆಳಕ್ಕೆ ಹಾರಿದ ಪೈಲಟ್; ಹಳೇ ವಿಡಿಯೋ ಮತ್ತೆ ವೈರಲ್