‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಪ್ರತಿಕ್ರಿಯೆ

|

Updated on: Jun 30, 2024 | 9:54 PM

‘ದರ್ಶನ್​ ನನ್ನ ಮಗು ಅಂತ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದಾಗ ತಂದೆಗೆ ಎಷ್ಟು ನೋವಾಗುತ್ತದೋ ನನಗೆ ಅಷ್ಟು ನೋವಾಗಿದೆ. ಆ ಮಗು ಕೂಡ ಅಷ್ಟೇ ನೋವು ಅನುಭವಿಸುತ್ತಿರುತ್ತದೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆಗೆ ನೋಡೋಣ’ ಎಂದು ಹಂಸಲೇಖ ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಆರೋಪಿ ಆಗಿದ್ದರಿಂದ ಚಂದನವನಕ್ಕೆ ಕಪ್ಪು ಚುಕ್ಕೆ ಆಗಿದೆ ಎಂಬ ಮಾತಿಗೆ ಹಂಸಲೇಖ ಅವರು ಪ್ರತಿಕ್ರಿಗೆ ನೀಡಿದ್ದಾರೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನಲಾದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಂದು (ಜೂನ್​ 30) ಮಂಡ್ಯದಲ್ಲಿ ಸಂಗೀತ ನಿರ್ದೇಶ, ಗೀತರಚನಕಾರ ‘ನಾದಬ್ರಹ್ಮ’ ಹಂಸಲೇಖ ಅವರು ಮಾತನಾಡಿದ್ದಾರೆ. ‘ಸಂಸ್ಕೃತದಲ್ಲಿ ಅತ್ಯುನ್ನತೇ ಪತನಹೇತು ಎಂಬ ಮಾತಿದೆ. ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿತು. ಎಷ್ಟೋ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಎಂಥೆಂಥಾ ಪ್ರತಿಭಾವಂತರು ಇಲ್ಲಿ ಹುಟ್ಟಿ ಬೆಳೆದಿದ್ದಾರೆ. ಅಷ್ಟು ಎತ್ತರಕ್ಕೆ ಏರಿದ ಮೇಲೆ ಕೆಳಗೆ ಬೀಳಬೇಕಾಗುತ್ತದೆ. ಹಾಗಾಗುವುದು ಬೇಡ. ಅಲ್ಲಿಂದ ಬಿದ್ದಿದ್ದು ಕೂಡ ಮತ್ತೆ ಏಳುವ ಸಾಧ್ಯತೆ ಇದೆ. ಕೇರಳ ಚಿತ್ರೋದ್ಯಮ ಹೀಗೆಯೇ ಆಗಿತ್ತು. ಅದು ಈಗ ಉತ್ತುಂಗದಲ್ಲಿದೆ. ಅಂದರೆ, ಕೆಳಗೆ ಬಿದ್ದು, ಮೇಲೆದ್ದಿದೆ. ಒಂದು ಮಳೆಗೆ ಮರ ಒಣಗಿದರೆ ಇನ್ನೊಂದು ಮಳೆಗೆ ಕಾಡು ಬೆಳೆಯುತ್ತದೆ. ನಾವು ಸಿನಿಮಾ ಕಲಾವಿದರು. ಸಿಟ್ಟನ್ನು ಸ್ಕ್ರಿಪ್ಟ್​ ಮಾಡಬೇಕು. ದ್ವೇಷವನ್ನು ಪಾತ್ರವಾಗಿ ಮಾಡಬೇಕು. ನಿಜಜೀವನದಲ್ಲಿ ಆ ಪಾತ್ರವಾಗಬಾರದು’ ಎಂದಿದ್ದಾರೆ ಹಂಸಲೇಖ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.