ಗುಡ್ಡಕುಸಿತಕ್ಕೆ ತುತ್ತಾದ ಮನೆಯಲ್ಲಿನ ಹಿಂದೂಗಳನ್ನು ರಕ್ಷಿಸಲು ನೆರೆಹೊರೆಯ ಮುಸಲ್ಮಾನರು ಶುಕ್ರವಾರದ ನಮಾಜ್ ಬಿಟ್ಟರು!

Updated on: May 30, 2025 | 6:57 PM

ಇವತ್ತು ಶುಕ್ರವಾರ, ಇವತ್ತಿನ ನಮಾಜ್ 12ವರ್ಷದ ಬಾಲಕನಿಂದ ಹಿಡಿದು ಎಲ್ಲ ಮುಸಲ್ಮಾನರಿಗೆ ಕಡ್ಡಾಯ, ಅದರೆ ನಮಗೆ ಇಂದು ಮಸೀದಿಗೆ ತೆರಳಿ ನಮಾಜ್ ಮಾಡುವುದು ಸಾಧ್ಯವಾಗಿಲ್ಲ, ಅದರೆ ನಾವು ಯಾಕೆ ಹೋಗಿಲ್ಲ ಅನ್ನೋದು ದೇವರಿಗೆ ಗೊತ್ತು, ನಾವು ಮಾಡಿದ ಕೆಲಸವನ್ನು ದೇವರು ಮೆಚ್ಚುತ್ತಾನೆ ಎಂದು ವರದಿಗಾರನೊಂದಿಗೆ ಮಾತಾಡಿದ ಮತ್ತೊಬ್ಬ ಹಿರಿಯರು ಹೇಳುತ್ತಾರೆ.

ಮಂಗಳೂರು, ಮೇ 30: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಕಾಂತಪ್ಪ ಪೂಜಾರಿ (Kanthappa Pujari) ಎನ್ನುವವರ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂರು ಜನ ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿ ಸಿಲುಕಿದ್ದ ಪೂಜಾರಿ ಕುಟುಂಬದ ಸದಸ್ಯರನ್ನು ರಕ್ಷಿಸಲು ಜನ ಧರ್ಮಭೇದ, ಜಾತಿಭೇದ ಮರೆತು ಮುಂದಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ನಮ್ಮ ಮಂಗಳೂರು ವರದಿಗಾರ ಅಲ್ಲಿನ ಜನರೊಂದಿಗೆ ಮಾತಾಡಿದ್ದಾರೆ. ಮುಸ್ಲಿಂ ಸಮುದಾಯದ ಜನ ಮಾತಾಡುವುದನ್ನು ಕೇಳಿಸಿಕೊಂಡಾಗ ಉಳ್ಳಾಲವೂ ದಕ್ಷಿಣ ಕನ್ನಡ ಜಿಲ್ಲೆಯ ಭಾಗವೇ ಎಂಬ ಸಂಶಯ ಕಾಡಲಾರಂಭಿಸುತ್ತದೆ. ಒಬ್ಬ ಯುವಕ ಹೇಳೋದನ್ನು ಕೇಳಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ-ಧರ್ಮಗಳ ಸಂಘರ್ಷವೇ ಇಲ್ಲ, ಯಾರೋ ಒಂದಿಬ್ಬರು ಕಿಡಿಗೇಡಿಗಳು ದುಷ್ಕೃತ್ಯಗಳನ್ನು ನಡೆಸಿ ಅದಕ್ಕೆ ಧರ್ಮದ ಲೇಪ ನೀಡುತ್ತಾರೆ, ಅವರು ಮಾಡುವ ಕೃತ್ಯ ಮತ್ತು ಮಾನವೀಯತೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಅವರು, ಗುಡ್ಡಕುಸಿತದಿಂದ ಮೃತಪಟ್ಟ ಮಕ್ಕಳ ಬಗ್ಗೆ ಮಾತಾಡುವಾಗ ಗದ್ಗದಿತರಾಗುತ್ತಾರೆ.

ಇದನ್ನೂ ಓದಿ:   ಶಿರೂರು ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಉತ್ತರ ಕನ್ನಡ ಪೊಲೀಸ್ ಇಲಾಖೆಯ ನೆಚ್ಚಿನ ನಾಯಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ