AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ನೆಮ್ಮದಿಯಾಗಿ ಮನೆಯಲ್ಲಿ ಮಲಗಿದ್ದವರ ಪಾಲಿಗೆ ನರಕವಾದ ಮಳೆ, ಗುಡ್ಡ ಕುಸಿತಕ್ಕೆ ಮೂವರು ಬಲಿ, ನಾಲ್ವರ ರಕ್ಷಣೆ

ನಿರಂತರ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿರುವಂತಹ ಘಟನೆ ನಡೆದಿದೆ. ಆರು ಜನರಿದ್ದ ಕುಟುಂಬದಲ್ಲಿ ಇಬ್ಬರು ಮೊಮ್ಮಕ್ಕಳು ಸೇರಿ ಅಜ್ಜಿ ಮೃತಪಟ್ಟಿದ್ದಾರೆ. ನಾಲ್ವರನ್ನು ಎನ್​ಡಿಆರ್​ಎಫ್, ಎಸ್​ಡಿಆರ್​​ಎಫ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಮಂಗಳೂರು: ನೆಮ್ಮದಿಯಾಗಿ ಮನೆಯಲ್ಲಿ ಮಲಗಿದ್ದವರ ಪಾಲಿಗೆ ನರಕವಾದ ಮಳೆ, ಗುಡ್ಡ ಕುಸಿತಕ್ಕೆ ಮೂವರು ಬಲಿ, ನಾಲ್ವರ ರಕ್ಷಣೆ
ಮನೆಯ ಮೇಲೆ ಗುಡ್ಡ ಕುಸಿತ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:May 30, 2025 | 2:11 PM

Share

ಮಂಗಳೂರು, ಮೇ 30: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅದ್ರಲ್ಲೂ ಮಂಗಳೂರು ಭಾಗದಲ್ಲಿ ನಿನ್ನೆ ರಾತ್ರಿ ಮಳೆ (Rain) ಅಕ್ಷರಶಃ ಅಟ್ಟಹಾಸ ಮೆರೆದಿದೆ. ಉಳ್ಳಾಲ ತಾಲೂಕಿನಲ್ಲಿ ಭಾರೀ ಮಳೆಗೆ ಎರಡು ಮನೆಗಳ ಮೇಲೆ ಗುಡ್ಡ ಕುಸಿದ್ದು, ಅಮಾಯಕ ಜೀವಗಳನ್ನು ಬಲಿ ಪಡಿದಿದೆ. ಆರು ಜನರಿದ್ದ ಕುಟುಂಬದಲ್ಲಿ ಇಬ್ಬರು ಮೊಮ್ಮಕ್ಕಳು ಸೇರಿ ಅಜ್ಜಿ ಮೃತಪಟ್ಟಿದ್ದಾರೆ (death). ಸುಮಾರು 10 ಗಂಟೆ ಕಾರ್ಯಾಚರಣೆ ನಡೆಸಿ ಇದುವರೆಗೆ ಒಟ್ಟು ನಾಲ್ವರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದೆ.

ಅಜ್ಜಿ ಪ್ರೇಮಾ ಪೂಜಾರಿ, ಮೊಮ್ಮಕ್ಕಳಾದ ಆರ್ಯನ್ ಮತ್ತು ಆರುಷ್​ ಮೃತರು. 10 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದ ಆರುಷ್​ ಕೂಡ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ. ಅವಶೇಷಗಳಡಿ ಸಿಲುಕಿ ನರಳಾಡುತ್ತಿದ್ದ ತಾಯಿ ಅಶ್ವಿನಿಯನ್ನು ರಕ್ಷಣೆ ಮಾಡಲಾಗಿದೆ.

ಭಾರಿ ಮಳೆಗೆ ತಡರಾತ್ರಿ ಕುಸಿದು ಬಿತ್ತು ಗುಡ್ಡ: ಮನೆಯೇ ಸರ್ವನಾಶ

ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಮಳೆಯಿಂದ ಗುಡ್ಡ ಕುಸಿದು, ಪಕ್ಕದಲ್ಲೇ ಇದ್ದ ಕಾಂತಪ್ಪ ಪುಜಾರಿ ಅನ್ನೋರ ಮನೆಮೇಲೆ ಬಿದ್ದಿದೆ. ಗುಡ್ಡ ಕುಸಿಯುವ ದೊಡ್ಡ ಶಬ್ಧ ಕೇಳಿ ಕಾಂತಪ್ಪ ಪೂಜಾರಿ ಎದ್ದು ಹೊರಗೆ ಓಡಿ ಬಂದಿದ್ದಾರೆ. ಅಷ್ಟರಲ್ಲೇ ಗುಡ್ಡದ ಹೊಡೆತಕ್ಕೆ ಇಡೀ ಮನೆಯೇ ಕುಸಿದು ಬಿದ್ದಿದೆ. ಕಾಂತಪ್ಪ ಪೂಜಾರಿ ಹೊರಗೆ ಓಡಿ ಬರುಷ್ಟರಲ್ಲಿ ಅವರ ಮೇಲೂ ಮನೆಯ ಸ್ಲ್ಯಾಬ್ ಬಿದ್ದಿದೆ. ಸದ್ಯ ಕಾಂತಪ್ಪ ಪೂಜಾರಿ ಕಾಲು ಮುರಿದಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮನೆ ಕುಸಿದು ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಮೃತಪಟ್ಟಿದ್ದಾರೆ.

ಇದನ್ನೂ ಓದಿ
Image
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
Image
ಮಂಗಳೂರು: ಭಾರಿ ಮಳೆಗೆ ಮನೆಗಳ ಮೇಲೆ ಗುಡ್ಡ ಕುಸಿತ, ಬಾಲಕಿ ಸಾವು
Image
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಅಬ್ಬರ: ಶಾಲೆಗಳಿಗೆ ಇಂದು ರಜೆ
Image
ದಕ್ಷಿಣ ಕನ್ನಡದಲ್ಲಿ ಸರಣಿ ಕೊಲೆ: ಐಪಿಎಸ್ ಅಧಿಕಾರಿಗಳ ಎತ್ತಂಗಡಿ

ಇದನ್ನೂ ಓದಿ: ಮಂಗಳೂರು: ಭಾರಿ ಮಳೆಗೆ ಮನೆಗಳ ಮೇಲೆ ಗುಡ್ಡ ಕುಸಿತ, ಬಾಲಕಿ ಸಾವು, ಅವಶೇಷಗಳಡಿ ಸಿಲುಕಿದ ಐವರ ರಕ್ಷಣೆಗೆ ಕಾರ್ಯಾಚರಣೆ

ಕಾಂತಪ್ಪ ಪೂಜಾರಿ ಪುತ್ರ ಸೀತಾರಾಮ್ ಪೂಜಾರಿ ಬಚಾವ್ ಆಗಿದ್ದರು. ಇನ್ನು ಅವಶೇಷಗಳಡಿ ಸಿಲುಕಿ ನರಳಾಡುತ್ತಿದ್ದ ಅಶ್ವಿನಿ ಅವರನ್ನು ಇದೀಗ ರಕ್ಷಣೆ ಮಾಡಲಾಗಿದೆ.

ರಾತ್ರಿ 4.30 ರಸುಮಾರಿಗೆ ಮನೆ ಕುಸಿದಿದೆ. ಆದರೆ ಈ ಪ್ರದೇಶ ದುರ್ಗಮವಾಗಿರೋದ್ರಿಂದ ಜೆಸಿಬಿ ಆಗಲಿ, ವಾಹನ ಹೋಗಲು ಜಾಗ ಇರಲಿಲ್ಲ. ಮೇಲಾಗಿ ಮಳೆ ಕೂಡ ಸುರಿಯುತ್ತಿತ್ತು. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೀಗಾಗಿ ರಾತ್ರಿಯಿಂದಲೇ ತಾಯಿ ಅಶ್ವಿನಿ ಮತ್ತು ಇಬ್ಬರು ಮಕ್ಕಳಾದ ಆರ್ಯನ್ ಮತ್ತು ಆರುಷ್ ಅವಶೇಷಗಳಡಿ ಸಿಲುಕಿದ್ದರು.

ಅರೆ ಪ್ರಜ್ಞಾವಸ್ತೆಯಲ್ಲಿದ್ದ ಅಶ್ವಿನಿ ಗಂಡನಿಗೆ ಎಲ್ಲಿದ್ದೀರಾ, ಮಕ್ಕಳು ಎಲ್ಲಿವೆ ಅಂತಾ ಕೂಗುತ್ತಿದ್ದರು. ಏನೂ ಅರಿಯದ ಒಂದುವರೆ ವರ್ಷದ ಪುಟ್ಟ ಕಂದಮ್ಮ ಆರುಷ್ ಅಲ್ಲಿ ಏನಾಗ್ತಿದೆ ಅನ್ನೋದು ಅರಿವಿಲ್ಲದೆ ಕೈ ಆಡಿಸುತ್ತಾ ಕಿರುಚಾಡುತ್ತಿದ್ದ ದೃಶ್ಯ, ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

ನನ್ನನ್ನ ಬಿಡಿ, ಮಕ್ಕಳನ್ನ ಉಳಿಸಿ ಅಂತಾ ಅಂಗಲಾಚಿದ ತಾಯಿ

ಇನ್ನು ವಿಷ್ಯ ತಿಳಿದು ಆಸೀಫ್ ಅನ್ನೋ ಸ್ಥಳೀಯರು ತಾಯಿ ಮಗು ಸಿಲುಕಿದ ಸ್ಥಳಕ್ಕೆ ಕಷ್ಟ ಪಟ್ಟು ತೆರಳಿದ್ದಾರೆ. ಈ ವೇಳೆ ತಾಯಿ ಅಶ್ವಿನಿಗೆ ನೀರು ಕೊಟ್ಟು ಸಂತೈಸಿದ್ದಾರೆ. ಆದರೆ ಮನೆಯೇ ಆಕೆ ಮೇಲೆ ಕುಸಿದು ಅರ್ಧ ಮಾತ್ರ ಹೊರಗೆ ಇದ್ದಿದ್ರಿಂದ ಆಕೆಯನ್ನ ಹೊರಗೆ ತೆಗೆಯಲು ಆಗಲಿಲ್ಲ. ಈ ವೇಳೆ ಈ ತಾಯಿ ನನ್ನನ್ನ ಬಿಟ್ಟು ಬಿಡಿ, ಮಕ್ಕಳನ್ನ ರಕ್ಷಿಸಿ ಅಂತಾ ಅಂಗಲಾಚಿದ್ದರು.

ದುರಂತ ಅಂದರೆ ಮನೆ ಕುಸಿದು ಅಸ್ವಸ್ಥಗೊಂಡಿದ್ದ ಅಶ್ವಿನಿಯ ಪುತ್ರ ಆರ್ಯನ್ ಕೊನೆಯುಸಿರು ಎಳೆದಿದ್ದ. ನಿರಂತರ ಕಾರ್ಯಾಚರಣೆ ನಡೆಸಿ, ಆರ್ಯನ್ ಮೃತದೇಹವನ್ನ ಹೊರಗೆ ತೆಗೆಯಲಾಗಿತ್ತು. ಬಳಿಕ ಕೆಲವೇ ಹೊತ್ತಿನಲ್ಲಿ ಅಶ್ವಿನಿ ತೋಳಿನಲ್ಲಿದ್ದ ಮತ್ತೊಂದು ಮಗು ಆರುಷ್​ನನ್ನ ಎಸ್​ಡಿಆರ್​ಎಫ್​, ಎನ್​ಡಿಆರ್​​ಎಫ್​​ ಸಿಬ್ಬಂದಿ ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದೆ.

ಇದನ್ನೂ ಓದಿ: ಮಳೆ ಆರ್ಭಟಕ್ಕೆ ಮಂಗಳೂರಿನಲ್ಲಿ ಪ್ರವಾಹ, ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ

ಸದ್ಯ ಮಳೆ ಹೊಡೆತದಿಂದ ಗುಡ್ಡ ಕುಸಿದು ಇಡಿ ಕುಟುಂಬವೇ ನರಕ ಅನುಭವಿಸಿದೆ. ಆರು ಜನರಿದ್ದ ಕುಟುಂಬದಲ್ಲಿ ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:09 pm, Fri, 30 May 25