ಶಿರೂರು ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಉತ್ತರ ಕನ್ನಡ ಪೊಲೀಸ್ ಇಲಾಖೆಯ ನೆಚ್ಚಿನ ನಾಯಿ
ಕಳೆದ ವರ್ಷ ಮಳೆಗಾಲದಲ್ಲಿ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಲ್ಲಿ 11 ಜನ ಮೃತಪಟ್ಟಿದ್ದರು. ಇದೇ ಗುಡ್ಡ ಕುಸಿತದಲ್ಲಿ ಲಕ್ಷ್ಮಣ್ ನಾಯ್ಕ್ ಎನ್ನುವ ಹೋಟೆಲ್ ಮಾಲೀಕನ ಕುಟುಂಬ ಮೃತಪಟ್ಟಿತ್ತು. ಲಕ್ಷ್ಮಣ್ ನಾಯ್ಕ್ ಕುಟುಂಬದವರು ಪ್ರೀತಿಯಿಂದ ಸಾಕಿದ್ದ ಶ್ವಾನ ಅಂದು ಅನಾಥವಾಗಿತ್ತು. ಇದೀಗ, ಆ ಶ್ವಾನ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಕಾರವಾರ, ಮಾರ್ಚ್ 10: ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರೂರಿನ ಗುಡ್ಡ ಕುಸಿತ (Shirur Landslide) ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 2024ರ ಜುಲೈ 16 ರಂದು ಧಾರಾಕಾರವಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ 11 ಜನ ಮೃತಪಟ್ಟಿದ್ದರು. ಹೆದ್ದಾರಿ ಪಕ್ಕದಲ್ಲೇ ಲಕ್ಷ್ಮಣ್ ನಾಯ್ಕ ಎಂಬುವರು ಹೋಟೆಲ್ ನಡೆಸುತ್ತಿದ್ದರು. ಗುಡ್ಡ ಕುಸಿದು ಮಣ್ಣು ಹೋಟೆಲ್ ಮೇಲೆ ಬಿದ್ದ ಪರಿಣಾಮ ಲಕ್ಷ್ಮಣ್ ನಾಯ್ಕ ಮತ್ತು ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.
ಈ ಘಟನೆಯಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬದವರು ಪ್ರೀತಿಯಿಂದ ಸಾಕಿದ್ದ ಶ್ವಾನ ಅನಾಥವಾಗಿತ್ತು. ಕಾರ್ಯಚರಣೆ ನಡೆಯುವ ಪ್ರತಿದಿನ ಅವಘಡ ಸಂಭವಿಸಿದ್ದ ಸ್ಥಳಕ್ಕೆ ಬಂದು ಮಾಲೀಕನ ಬರುವಿಕೆಗಾಗಿ ಶ್ವಾನ ಕಾಯುತ್ತಾ ಕುಳಿತಿದ್ದು, ಸಾಕಷ್ಟು ಗಮನ ಸೆಳೆದಿತ್ತು. ಇದನ್ನು, ಗಮನಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ಶ್ವಾನವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಿದ್ದಾರೆ.
ಈ ಶ್ವಾನಕ್ಕೆ ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ತರಬೇತಿ ನೀಡಿಲಾಗಿದ್ದು, ರವಿವಾರ (ಮಾ.09) ಪೊಲೀಸ್ ಇಲಾಖೆಯಿಂದ ನಡೆದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾದ ಮುಕ್ತ ಕರ್ನಾಟಕ ಜಾಗೃತಿ ಮೂಡಿಸುವ ಮ್ಯಾರಾಥಾನ್ನಲ್ಲಿ 5 ಕಿಮೀ ಓಡಿ ಪದಕವನ್ನ ಪಡೆದಿದೆ. ಶ್ವಾನಕ್ಕೆ ಸ್ವತಃ ಎಸ್ಪಿ ಎಂ ನಾರಾಯಣ್ ತರಬೇತಿಯನ್ನು ನೀಡಿದ್ದು, ಬೇರೆ ಪೊಲೀಸ್ ಶ್ವಾನಗಳಂತೆ ಈ ಶ್ವಾನ ಸಹ ಸಾಕಷ್ಟು ಚುರುಕಿನಿಂದ ಕೆಲಸ ಮಾಡುತ್ತಿದೆ. ಹೀಗಾಗಿ, ಇದು, ಎಸ್ಪಿ ಎಂ. ನಾರಾಯಣ್ ಅವರ ನೆಚ್ಚಿನ ಶ್ವಾನವಾಗಿದೆ.
ಪ್ರತಿನಿತ್ಯ ಬೆಳಿಗ್ಗೆ ನಾನು (ಎಂ. ನಾರಾಯಣ್) ಕೆಲಸಕ್ಕೆ ತೆರಳುವಾಗ ಸಲ್ಯೂಟ್ ಮಾಡುತ್ತದೆ. ಮನೆಗೆ ವಾಪಾಸ್ ಬರುವವರೆಗೂ ಗೇಟ್ ಬಳಿಯೇ ಕಾಯುತ್ತಾ ಕುಳಿತಿರುತ್ತದೆ. ಮೀಟಿಂಗ್ ಅಥವಾ ಇನ್ನಿತರ ಕಾರಣಕ್ಕೆ ಬೆಂಗಳೂರಿಗೆ ಹೋದರೇ ನಾನು ಮರಳಿ ಮನೆಗೆ ಬರುವವರೆಗೆ ಮಂಕಾಗಿ ಇರುತ್ತದೆ. ಈ ಹಿನ್ನಲೆಯಲ್ಲಿ ಶ್ವಾನ ನನ್ನ ಮನೆಯ ಸದಸ್ಯನಂತಾಗಿದೆ ಎಂದು ಎಂ ನಾರಾಯಣ್ ಹೇಳಿದ್ದಾರೆ.
ಈ ಶ್ವಾನವನ್ನು ಶಿರೂರಿನಲ್ಲಿಯೇ ಬಿಟ್ಟು ಬಂದಿದ್ದರೆ, ಬೇರೆ ನಾಯಿಗಳಂತೆ ಇದು ಇರುತ್ತಿತ್ತು. ಆದರೆ, ಅದನ್ನು ತಂದು ಸೂಕ್ತ ತರಬೇತಿ ನೀಡಿದ ಪರಿಣಾಮ ಎಲ್ಲರ ಗಮನ ಸೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ‘ನಾನೂ ನಿಮ್ಮಂತೆ ಡಿಸಿ ಆಗಬೇಕು’: ವಿದ್ಯಾರ್ಥಿನಿ ಮಾತಿಗೆ ಉತ್ತರ ಕನ್ನಡ ಡಿಸಿ ಮಾಡಿದ್ದೇನು ಗೊತ್ತಾ?
ಒಟ್ಟಿನಲ್ಲಿ ಮಾಲೀಕನ ಕಳೆದುಕೊಂಡು ಬೀದಿಯಲ್ಲಿ ತಿರುಗುತ್ತಿದ್ದ ಶ್ವಾನವನ್ನು ಪೊಲೀಸ್ ಇಲಾಖೆಯ ಸೇವೆಯಲ್ಲಿ ಬಳಸಿಕೊಂಡ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.