‘ನಾನೂ ನಿಮ್ಮಂತೆ ಡಿಸಿ ಆಗಬೇಕು’: ವಿದ್ಯಾರ್ಥಿನಿ ಮಾತಿಗೆ ಉತ್ತರ ಕನ್ನಡ ಡಿಸಿ ಮಾಡಿದ್ದೇನು ಗೊತ್ತಾ?
ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ವಿದ್ಯಾರ್ಥಿನಿಯೊಬ್ಬಳು ಜಿಲ್ಲಾಧಿಕಾರಿಯಾಗುವ ತಮ್ಮ ಕನಸನ್ನು ಹಂಚಿಕೊಂಡಾಗ, ತಮ್ಮ ಕುರ್ಚಿಯಲ್ಲಿ ಕೂರಿಸಿ ಪ್ರೋತ್ಸಾಹಿಸಿದರು. ಇದು ವಿದ್ಯಾರ್ಥಿನಿಗೆ ಉನ್ನತ ಸಾಧನೆಗೆ ಪ್ರೇರಣೆ ನೀಡುವುದಲ್ಲದೆ, ಜಿಲ್ಲಾಧಿಕಾರಿಯ ಸಾಮಾಜಿಕ ಜವಾಬ್ದಾರಿಯನ್ನು ಸಾರುತ್ತದೆ. ಲಕ್ಷ್ಮೀಪ್ರಿಯಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕಾರವಾರ, ಮಾರ್ಚ್ 07: ಕಾರು, ಕಾಲಿಗೊಂದು ಕೈಗೊಂದು ಆಳು, ಒಂದೇ ಕರೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕೆಲಸ ಮಾಡಿಸಬಲ್ಲ ತಾಕತ್ತು ಹೊಂದಿರುವ ಜಿಲ್ಲಾಧಿಕಾರಿಯನ್ನ (DC) ನೋಡಿದ ಅನೇಕ ಮಕ್ಕಳಿಗೆ (Student) ತಾನೂ ಕೂಡ ಡಿಸಿ ಆಗಬೇಕೆಂಬ ಬಯಕೆ ಆಗುವುದು ಸಹಜ. ಆ ಬಯಕೆಯನ್ನ ನಿರಂತರವಾಗಿ ಕಾಯ್ದಿರಿಸುವಂತೆ ಪ್ರೇರಣೆ ನೀಡುವುದು ಕೂಡ ಅಷ್ಟೇ ಮುಖ್ಯ ಆಗಿರುತ್ತೆ. ಆ ಕೆಲಸವನ್ನ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಡಿದ್ದಾರೆ.
ತಮ್ಮ ಕಚೇರಿಗೆ ಯಾವಾಗ ಯಾರೂ ಬೇಕಾದರೂ ಬಂದು ತಮ್ಮ ಕೆಲಸವನ್ನ ಕೆಳಬಹುದು. ನಾವು ಇರುವುದು ಜನರಿಗಾಗಿ, ಜನಪರ ಕೆಲಸ ಮಾಡುವುದು ನಮ್ಮ ಕರ್ತವ್ಯ ಅಂತ ಭಾಷಣ ನಾಮ ಫಲಕ ಹಾಕುವ ಅಧಿಕಾರಿಗಳನ್ನ ನಾವು ನೋಡಿದ್ದೆವೆ ಆದರೆ, ತಮ್ಮ ಕಚೇರಿಗೆ ಬಂದವರೆಲ್ಲಾ ಸಂತಸದಿಂದ ಹಿಂತಿರುಗಬೇಕು, ಜಿಲ್ಲಾಧಿಕಾರಿ ಹುದ್ದೆಯ ಬಗ್ಗೆ ಒಳ್ಳೆಯ ಗೌರವ ಮುಡಿಸಬೇಕಂತ ಕಾರ್ಯರೂಪದಲ್ಲಿ ತರುವವರು ಭಾರಿ ವಿರಳ. ಆದರೆ ಕಳೆದ ಎಂಟು ತಿಂಗಳಿನಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿ ಆಗಿ ಕೆಲಸ ಮಾಡುತ್ತಿರುವ ಲಕ್ಷ್ಮೀಪ್ರಿಯಾ ಸರಳ ನಡೆಯಿಂದ ಜಿಲ್ಲೆಯಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 9 ಕಡೆ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ಉದ್ಘಾಟನೆಗೆ ಆಗಮಿಸಿದ್ದ ಮೆಟ್ರಿಕ್ ಪೂರ್ವ ಬಾಲಕಿಯರ್ ಹಾಸ್ಟೆಲ್, ಬಾಡದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಉತ್ಸುಕತೆಯಿಂದ ಅವರ ಕಚೇರಿಯ ಕೊಠಡಿಗೆ ತೆರಳಿದರು.
ವಿದ್ಯಾರ್ಥಿನಿಯರೊಂದಿಗೆ ಅವರ ವಿದ್ಯಾಭ್ಯಾಸದ ಬಗ್ಗೆ ಮತ್ತು ಆರೋಗ್ಯದ ಕುರಿತು ವಿಚಾರಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ವಿದ್ಯಾಭ್ಯಾಸದ ನಂತರ ಮುಂದೆ ಏನಾಗಬೇಕು ಎಂದು ಕೊಂಡಿದ್ದೀರಿ ಎಂದು ವಿಚಾರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ಡಾಕ್ಟರ್, ಲಾಯರ್, ಇಂಜಿನಿಯರ್ ಆಗುವ ಮತ್ತು ನೌಕಾಪಡೆ ಸೇರುವ ಬಗ್ಗೆ ತಿಳಿಸಿದರು. ಆದರೆ ಅದರಲ್ಲಿದ್ದ ಯಲ್ಲಾಪುರ ಮೂಲದ 8ನೇ ತರಗತಿ ವಿದ್ಯಾರ್ಥಿನಿ ಸುದೀಪ್ತ ಶಂಕರ್ ಅತ್ತರವಾಲ್ ಮಾತ್ರ ನಾನು ನಿಮ್ಮ ಹಾಗೆ ಡಿಸಿ ಆಗಬೇಕು, ಅದಕ್ಕೆ ಏನು ಓದಬೇಕು ಎಂದು ಜಿಲ್ಲಾಧಿಕಾರಿಗಳನ್ನೇ ಪ್ರಶ್ನಿಸಿದರು.
ಯಾವ ಕಾರಣಕ್ಕೆ ಡಿಸಿ ಆಗಬೇಕು ಎಂಬ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿನಿ, ಸಮಾಜದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸಬೇಕು, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು ಆದ್ದರಿಂದ ಡಿಸಿ ಆಗಬೇಕು ಎಂದರು. ಬಾಲಕಿಯ ಪ್ರಶ್ನೆ ಮತ್ತು ಉತ್ತರದಂದ ಅಚ್ಚರಿಗೊಂಡ ಜಿಲ್ಲಾಧಿಕಾರಿ, ನೀನು ಇನ್ನೂ ಚಿಕ್ಕವಳಿದ್ದೀಯಾ ಈಗಿನಿಂದಲೇ ಚೆನ್ನಾಗಿ ಓದು, ದಿನಪತ್ರಿಕೆಗಳನ್ನು ಓದಿ ಹೆಚ್ಚಿನ ಸಾಮಾನ್ಯ ಜ್ಞಾನ ಬೆಳಸಿಕೊಳ್ಳಬೇಕು. ಪದವಿ ಶಿಕ್ಷಣದ ನಂತರ ಯುಪಿಎಸ್‌ಸಿ ಪರೀಕ್ಷೆಗೆ ಅಗತ್ಯ ತರಬೇತಿ ಪಡೆದು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಆಗ ಡಿಸಿ ಆಗುತ್ತಿಯಾ, ಇದಕ್ಕಾಗಿ ನಿರಂತರವಾಗಿ ಶ್ರಮ ಪಡಬೇಕು ಎಂದರು.
ಜಿಲ್ಲಾಧಿಕಾರಿಯಾಗುವ ನಿನ್ನ ಕನಸನ್ನು ನನಸು ಮಾಡಿಕೊಳ್ಳಲು ಯಾವುದೇ ಸಂದರ್ಭದಲ್ಲೂ ಇಟ್ಟು ಕೊಂಡಿರುವ ಗುರಿಯಿಂದ ಮತ್ತು ನಿರ್ಧಾರಗಳಿಂದ ಹಿಂದೆ ಸರಿಯದಂತೆ ವಿದ್ಯಾರ್ಥಿನಿಗೆ ಕಿವಿಮಾತು ಹೇಳಿ, ನಿನ್ನ ಕನಸಿಗೆ ನನ್ನಿಂದ ಈಗಿನಿಂದಲೇ ಪ್ರೇರಣೆ ಸಿಗಲಿ ಎಂದು ತಾವು ಕುಳಿತಿದ್ದ ಕುರ್ಚಿಯಿಂದ ಕೆಳಗಿಳಿದು ವಿದ್ಯಾರ್ಥಿಯನ್ನು ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕೂರಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಮುಂದಾದ ಡಿಸಿ ಲಕ್ಷ್ಮೀಪ್ರಿಯಾ
ಇತರ ವಿದ್ಯಾರ್ಥಿಗಳ ಜೊತೆ ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತದ್ದ ಬಾಲಕಿಯ ಹಿಂದೆ ನಿಂತ ಜಿಲ್ಲಾಧಿಕಾರಿಗಳು ಫೋಟೋ ತೆಗೆಸಿಕೊಂಡು, ಮುಂದೆ ನಿಜವಾಗಿಯೂ ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಆಸೀನವಾಗುವಂತಾಗಲಿ ಎಂದು ಸುದೀಪ್ತ ಶಂಕರ್ ಅತ್ತರವಾಲ್ಗೆ ಹಾರೈಸಿ, ಇತರೇ ವಿದ್ಯಾರ್ಥಿಗಳಿಗೂ ತಮ್ಮ ಗುರಿ ಸಾಧನೆಗೆ ಸತತವಾಗಿ ಪ್ರಯತ್ನಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ನಿಜಕ್ಕೂ ಹೆಮ್ಮೆ ಆಯ್ತು, ನಾನೂ ಜಿಲ್ಲಾಧಿಕಾರಿ ಆಗಿಯೇ ಆಗುತ್ತೀನಿ ಎಂಬ ದೃಢ ನಿರ್ಧಾರ ಮಾಡಿದ್ದೇನೆ ಎಂದು ಸುದೀಪ್ತ ಶಂಕರ್ ಅತ್ತರವಾಲ್ ವಿದ್ಯಾರ್ಥಿನಿ ತಿಳಿಸಿದ್ದಾಳೆ. ಜಿಲ್ಲಾಧಿಕಾರಿಯಾಗ ಬಯಸಿದ ವಿದ್ಯಾರ್ಥಿನಿಗೆ ಸೂಕ್ತ ಮಾರ್ಗದರ್ಶನ ನೀಡಿ, ತಮ್ಮ ಕುರ್ಚಿಯಲ್ಲಿ ಕೂರಿಸಿ ಅವರ ಕನಸಿಗೆ ಬೆಂಬಲಿಸಿರುವ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಕಾರ್ಯ ಜಿಲ್ಲೆಯ ಹಲವು ವಿದ್ಯಾರ್ಥಿನಿಯರಿಗೆ ಉನ್ನತ ಸಾಧನೆಗಳನ್ನು ಮಾಡಲು ಪ್ರೇರಣೆ ನೀಡುವುದು ಖಚಿತ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.