ಮಾರಿಕಾಂಬೆ ದೇವಿಯ ಗೊಂಬೆ ನಾಪತ್ತೆ: ಮುರಿನಕಟ್ಟೆಯಲ್ಲಿ ಸ್ಥಳೀಯರು, ಪೊಲೀಸರ ನಡುವೆ ಮಾತಿನ ಚಕಮಕಿ
ಭಟ್ಕಳ ತಾಲೂಕಿನ ಮುರಿನಕಟ್ಟೆಯಲ್ಲಿ ಶ್ರೀ ಮಾರಿಕಾಂಬೆ ಅಮ್ಮನವರ ಮರದ ಗೊಂಬೆ ಕಳುವಾಗಿರುವ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಆಸರಕೇರಿಯಿಂದ ತಂದ ಗೊಂಬೆ, ಪೂಜೆಯ ಬಳಿಕ ನಾಪತ್ತೆಯಾಗಿದೆ. ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಆರೋಪಿಸಲಾಗಿದೆ.
ಕಾರವಾರ, ಡಿಸೆಂಬರ್ 25: ಶ್ರೀ ಮಾರಿಕಾಂಬೆ ಅಮ್ಮನವರ ಹೊರೆ ತೆಗೆಯುವ ವೇಳೆಯಿದ್ದ ದೇವಿಯ ಮರದ ಗೊಂಬೆ ನಾಪತ್ತೆ (Missing) ಆಗಿರುವಂತಹ ಘಟನೆ ಭಟ್ಕಳ ತಾಲೂಕಿನ ವಿವಾದಿತ ಸ್ಥಳವಾದ ಮುರಿನಕಟ್ಟೆಯಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ಆಸರಕೇರಿಯ ಜನರು ವನದುರ್ಗಿ ದೇವಸ್ಥಾನದ ಬಳಿಯಿದ್ದ ಅಮ್ಮನ ಹೊರೆ ಸಾಗಿಸಿದ್ದರು. ಅಲ್ಲದೇ, ಶಂಸುದ್ದೀನ್ ಸರ್ಕಲ್ ಬಳಿಯಿದ್ದ 2 ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿ, ಪೂಜೆ ಸಲ್ಲಿಸಿ ಬಂದಿದ್ದರು. ಕಾರ್ಗದ್ದೆ, ಹುರುಳಿಸಾಲ, ಕಡವಿನಕಟ್ಟೆ ಹಾಗೂ ರಂಗಿನಕಟ್ಟೆಯ ಗ್ರಾಮಸ್ಥರು ಪರಿಶೀಲಿಸಿದಾಗ ಬೊಂಬೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸದ್ಯ ವಿಷಯ ಎಲ್ಲೆಡೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿ ಕೆಲ ಕಾಲ ಆತಂಕ ಸೃಷ್ಟಿ ಆಗಿತ್ತು. ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಕೆಲವು ಹೊತ್ತು ಸ್ಥಳೀಯರಿಗೂ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಇದನ್ನೂ ಓದಿ: ಕೋಲಾರದಲ್ಲಿ ಹೃದಯವಿದ್ರಾವಕ ಘಟನೆ: ತನ್ನಿಬ್ಬರು ಕಂದಮ್ಮಗಳನ್ನ ಕೊಂದು ತಾಯಿಯೂ ಆತ್ಮಹತ್ಯೆ
ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಸ್ಥಳೀಯ ಹಿಂದೂ ಮುಖಂಡ ಗೋವಿಂದ ನಾಯ್ಕರಿಗೆ ಜಿಲ್ಲಾ ಎಸ್ಪಿ ಎಂ.ನಾರಾಯಣ್ ಕರೆ ಮಾಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಅಮ್ಮನರ ಹೊರೆಯನ್ನು ವಾಹನದಲ್ಲಿ ತುಂಬಿ ವೆಂಕಟಾಪುರ ಗಡಿಭಾಗಕ್ಕೆ ಸ್ಥಳೀಯರು ತಲುಪಿಸಿದ್ದಾರೆ.
ಕದ್ದ ಬೈಕ್ ವಾಪಾಸ್ ಮರಳಿಸಿದ ಕಳ್ಳ
ಸಿಕ್ಕಿಬೀಳುವ ಭಯದಲ್ಲಿ ಕದ್ದ ಬೈಕ್ನ್ನು ಕಳ್ಳ ವಾಪಸ್ ಕದ್ದ ಜಾಗದಲ್ಲೇ ವಾಪಾಸ್ ನಿಲ್ಲಿಸಿ ಪರಾರಿ ಆಗಿರುವಂತಹ ಘಟನೆ ಭಟ್ಕಳದ ಸಂಶುದ್ಧೀನ್ ಸರ್ಕಲ್‌ನಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. ಬೈಕ್ ಕದ್ದಿದ್ದ ಪೆಟ್ರೋಲ್ ಬಂಕ್ನಲ್ಲಿ ಸಿಸಿ ಕ್ಯಾಮೆರಾ ಇರುವುದು ನಂತರ ತಿಳಿದುಬಂದಿದೆ. ಹಾಗಾಗಿ ತನ್ನ ಚಹರೆ ಗೊತ್ತಾಗುವ ಭಯದಲ್ಲಿ ಕಳ್ಳ ಬೈಕ್ ವಾಪಾಸ್ ಮರಳಿಸಿದ್ದಾನೆ.
ಭಟ್ಕಳದ ಬೆಳ್ನೆ ಬಳಿಯ ಮಂಜುನಾಥ ಹೆಮ್ಮಯ್ಯ ನಾಯ್ಕ ಎಂಬವರ ಬೈಕ್ ಕಳ್ಳತನವಾಗಿತ್ತು. ತಮ್ಮ ಬೈಕ್ ನಿಲ್ಲಿಸಿ ಮಾರುಕಟ್ಟೆಗೆ ತೆರಳಿ ಬರುವುದರೊಳಗೆ ಬೈಕ್ ಕಳ್ಳತನವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಭಟ್ಕಳ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮೆರಾ ವೀಕ್ಷಿಸಿದಾಗ ನಕಲಿ ಚಾವಿ ಬಳಸಿ ಕಳ್ಳತನ ಮಾಡಿರುವುದು ತಿಳಿದು ಬಂದಿತ್ತು. ಪಟ್ಟೆ ಅಂಗಿಯ ವ್ಯಕ್ತಿ ನಕಲಿ ಚಾವಿ ಬಳಸಿ ಬೈಕ್ ಕದ್ದೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು.
ಸಮುದ್ರದ ಸುಳಿಗೆ ಸಿಲುಕಿ ನೀರು ಪಾಲಾಗಿದ್ದ ಇಬ್ಬರು ವಿದೇಶಿ ಪ್ರವಾಸಿಗರ ರಕ್ಷಣೆ
ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಇಬ್ಬರು ವಿದೇಶಿ ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿಗಳು ರಕ್ಷಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಬಳಿಯ ಕುಡ್ಲೆ ಕಡಲತೀರದಲ್ಲಿ ನಡೆದಿದೆ.
ರಷ್ಯಾದ ಇರೀನಾ(38), ಆನ್ಯ(27) ಜೀವಾಪಾಯದಿಂದ ಪಾರಾಗಿ ಬಂದ ವಿದೇಶಿ ಪ್ರವಾಸಿಗರು. ಒಟ್ಟು ಮೂವರು ಸ್ನೇಹಿತರು ಜೊತೆಯಾಗಿ ಸಮುದ್ರದಲ್ಲಿ ಈಜಾಡಲು ತೆರಳಿದಾಗ ನಡೆದ ದುರ್ಘಟನೆ ನಡೆದಿದೆ. ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಕುರ್ಲೆ, ಮಂಜುನಾಥ ಎಸ್ ಹರಿಕಂತ್ರ ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಿದ್ದಾರೆ. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆಗೆ ನುಗ್ಗಿ ಕತ್ತು ಹಿಸುಕಿ ವೃದ್ಧೆಯನ್ನು ಹತ್ಯೆಗೈದ ದುಷ್ಕರ್ಮಿಗಳು
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಬಸವನಗಲ್ಲಿಯಲ್ಲಿ ಮನೆಗೆ ನುಗ್ಗಿ ಕತ್ತು ಹಿಸುಕಿ ವೃದ್ಧೆಯನ್ನು ದುಷ್ಕರ್ಮಿಗಳು ಹತ್ಯೆಗೈದಿರುವಂತಹ ಘಟನೆ ನಡೆದಿದೆ. ಸಹಕಾರಿ ಬ್ಯಾಂಕ್ನ ಪಿಗ್ಮಿ ಕಲೆಕ್ಟರ್ ಗೀತಾ ಹೂಂಡೆಕರ(72) ಕೊಲೆಯಾದ ವೃದ್ಧೆ.
ನಿತ್ಯ 5ರಿಂದ 10 ಸಾವಿರ ರೂ. ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದ ಗೀತಾಗೆ ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರ ಮದುವೆ ಕೂಡ ಆಗಿದೆ. ಪತಿ ಸಾವಿನ ಬಳಿಕ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಮನೆಯೊಳಗೆ ಹೋದವಳು ಹೊರಗೆ ಬಂದಿರಲಿಲ್ಲ. ಅನುಮಾನ ಬಂದು ಅಕ್ಕಪಕ್ಕದ ನಿವಾಸಿಗಳು ಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಟಿಟಿ ವಾಹನದ ಟೈಯರ್ ಬ್ಲಾಸ್ಟ್ ಆಗಿ ಸರಣಿ ಅಪಘಾತ, ಮೂವರು ಸ್ಥಳದಲ್ಲೇ ಸಾವು
ಮಗಳು ಮತ್ತು ಅಳಿಯ ಬಂದು ನೋಡಿದಾಗ ಕೊಲೆ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಹೊತ್ತು ಬಾತ್ರೂಂ ಮೇಲ್ಚಾವಣಿಯಿಂದ ನುಗ್ಗಿದ್ದ ದುಷ್ಕರ್ಮಿಗಳು, ವೃದ್ಧೆ ಗೀತಾ ಕತ್ತು ಹಿಸುಕಿ ಹತ್ಯೆಗೈದು ಹಣ ದೋಚಿಕೊಂಡು ಪರಾರಿ ಆಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.