ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ ಸ್ಫೋಟಕ ಹೇಳಿಕೆ
ಜೈಕಾರದ ಮಧ್ಯೆಯೇ ತೂರಿ ಬಂದ ಮೊಟ್ಟೆ ನೇರವಾಗಿ ಬಿಜೆಪಿ ಶಾಸಕ ಮುನಿರತ್ನ ತಲೆಗೆ ಬಡಿದಿದೆ. ಪೊಲೀಸರ ಕೋಟೆಯೇ ಇದ್ರು, ಸ್ಥಳದಲ್ಲಿದ್ದವರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ. ಸಿ.ಟಿ.ರವಿ ಪ್ರಕರಣ ಹಸಿಯಾಗಿರುವಾಗಲೇ ಮತ್ತೊಬ್ಬ ಬಿಜೆಪಿಯ ಎಂಎಲ್ಎ ಪ್ರಹಸನ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, (ಡಿಸೆಂಬರ್ 25): ಬೆಂಗಳೂರಿನ ಆರ್ಆರ್.ನಗರದ ಶಾಸಕ ಮುನಿರತ್ನ ಅವರು ಇಂದು(ಡಿಸೆಂಬರ್ 25) ಲಕ್ಷ್ಮೀದೇವಿ ನಗರ ವಾರ್ಡ್ನಲ್ಲಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬೆಳಗ್ಗೆ 11ರಿಂದ 11.30ರ ಹೊತ್ತಿಗೆ ಕಚೇರಿಗೆ ಮುನಿರತ್ನ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಹೊರಟಿದ್ದರು. ಕಾರ್ಯಕರ್ತರ ಜೈಕಾರದ ಮಧ್ಯೆ ನಡೆದುಕೊಂಡು ಹೋಗುತ್ತಿದ್ದ ಶಾಸಕ ಮುನಿರತ್ನ ಮೇಲೆ ಏಕಾಏಕಿ ಮೊಟ್ಟೆ ದಾಳಿ ನಡೆದಿದೆ. ಮೊಟ್ಟೆ ಏಟು ಬೀಳುತ್ತಿದ್ದಂತೆಯೇ ಮುನಿರತ್ನ ಅವರು ತಲೆ ಹಿಡಿದುಕೊಂಡು ನೇರವಾಗಿ ಕೆಸಿ ಜನರಲ್ ಆಸ್ಪತ್ರಗೆ ದಾಖಲಾಗಿದ್ದಾರೆ. ಈ ಪ್ರಕರಣ ರಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದಾರೆ. ಇನ್ನು ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿ ಮುನಿರತ್ನ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ವಿರೋಧ ಪಕ್ಷದ ಮೇಲೆ ಪೊಲೀಸರ ಬಳಸಿ ಒಂದಲ್ಲ ಒಂದು ಕೃತ್ಯ ಎಸಗುತ್ತಿದೆ. ಹರೀಶ್ ಪೂಂಜಾ ಮೇಲೆ ಪ್ರಕರಣ ದಾಖಲು ಮಾಡಿದ್ರು. ಸದನದ ಹೊರಗೆ ಸಿಟಿ ರವಿ ನಡೆಸಿಕೊಂಡ ರೀತಿ ನೋಡಿದ್ದೀರಾ. ಸರ್ಕಾರದ ಕುಮ್ಮಕ್ಕಿನಿಂದ ಆಗಿರುವ ಘಟನೆ. ಈಗ ಮುನಿರತ್ನ ಮೇಲೆ ಮೊಟ್ಟೆ ದಾಳಿ ಆಗಿರುವುದು ಸಣ್ಣ ಘಟನೆ ಅಲ್ಲ. ಶಾಸಕರ ಮೇಲೆ ಹೇಗಾದರು ಮಾಡಿ ಶಾಸಕ ಸ್ಥಾನ ಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಲಾಗುತ್ತಿದ್ದು, ಬಳಿಕ ಅವರಿಗೆ ಬೇಕಾದವರನ್ನ ಗೆಲ್ಲಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.