ನಾನು ಸಾಯುವರೆಗೆ ಅವನು ನನ್ನಲ್ಲಿ ಬದುಕಿರುತ್ತಾನೆ ಎಂದರು ನವೀನ್ ಶೇಖರಪ್ಪ ಗ್ಯಾನಗೌಡರ್ ತಾಯಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 20, 2022 | 12:18 AM

ಒಬ್ಬ ಡಾಕ್ಟರ್ ಆಗಿ ಹಳ್ಳಿಗಳಲ್ಲಿ ಬಡವರರ ಸೇವೆ ಮಾಡಬೇಕೆನ್ನುವ ಆಸೆ ಅವನು ಇಟ್ಟುಕೊಂಡಿದ್ದ, ಅದರೆ ಅದು ಈಡೇರಲಿಲ್ಲ, ಅವನ ದೇಹವಾದರೂ ಅವರನಂತೆ ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಅದನ್ನು ದಾವಣಗೆರೆ ಮೆಡಿಕಲ್ ಕಾಲೇಜಿಗೆ ಡೊನೇಟ್ ಮಾಡತ್ತಿದ್ದೇವೆ ಎಂದು ಅವರು ಹೇಳಿದರು

ಹಾವೇರಿ: ಉಕ್ರೇನಿನ ಖಾರ್ಕಿವ್ ನ್ಯಾಶನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ (Kharkiv National Medical University) 4ನೇ ವರ್ಷದ ವಿದ್ಯಾರ್ಥಿಯಾಗಿದ್ದ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gyanagouder) ದೇಹ ಅಂತಿಮವಾಗಿ ರಷ್ಯಾ ನಡೆಸಿದ ಶೆಲ್ಲಿಂಗ್ ಗೆ ಅವರು ಬಲಿಯಾದ 3 ವಾರಗಳ ನಂತರ ತವರಿಗೆ ಬರುತ್ತಿದೆ. ಸೋಮವಾರ ಬೆಳಗ್ಗೆ ನವೀನ್ ದೇಹ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಅಂಬ್ಯುಲೆನ್ಸ್ ಒಂದರಲ್ಲಿ ಅವರ ದೇಹವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿರುವ ಚಳಗೇರಾ ಗ್ರಾಮಕ್ಕೆ ತರಲಾಗುವುದು. ಈ ಸಂದರ್ಭದಲ್ಲಿ ಹಾವೇರಿಯ ಟಿವಿ9 ವರದಿಗಾರ ಪ್ರಭುಗೌಡ ಪಾಟೀಲ ಅವರು ನವೀನ್ ತಾಯಿ ವಿಜಯಲಕ್ಷ್ಮಿ(Vijayalaxmi) ಅವರನ್ನು ಮಾತಾಡಿಸಿದರು.

ನವೀನ್ ದೇಹ ಬೆಂಗಳೂರಿಗೆ ಬೆಳಗಿನ ಜಾವ 3 ಗಂಟೆಗೆ ಬರುತ್ತಿದೆ, ಅಂಬ್ಯುಲೆನ್ಸ್ ನಲ್ಲಿ ದೇಹವನ್ನು ತೆಗೆದುಕೊಂಡು ಹೋಗಿ ಅಂತ ನಮಗೆ ಸಂದೇಶ ಬಂದಿದೆ, ಬೆಳಗ್ಗೆ 9-10 ಗಂಟೆಯವರೆಗೆ ಅವನ ದೇಹ ಊರು ತಲುಪಬಹುದು ಎಂದು ಹೇಳುವ ವಿಜಯಲಕ್ಷ್ಮಿ ಅವರು ಕೊನೆಗೂ ಮಗನ ಮುಖ ನೋಡಲು ಸಾಧ್ಯವಾಗುತ್ತಿದೆಯಲ್ಲ ಅಂತ ಸಂತೋಷವಾಗುತ್ತಿದೆ ಅನ್ನುತ್ತಾರೆ.

ಅವರ ವೇದನೆ ಎಂಥದ್ದು ನೋಡಿ. ಮಗನ ಮುಖವನ್ನು ಕೊನೆಯ ಬಾರಿಗೆ ನೋಡಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಸಂಕಟ ಅವರಲ್ಲಿತ್ತು. ಮೃತ ದೇಹ ಬರುತ್ತಿರುವುದು ಕೇಳಿ ಸಂತೋಷವಾಗುತ್ತಿದೆ ಅಂತ ಅವರು ಹೇಳುತ್ತಾರೆ. ಇಂಥ ಸ್ಥಿತಿ ಯಾವ ತಾಯಿಗೂ ಬರಬಾರದು ಮಾರಾಯ್ರೇ.

ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವ ಘರ್ ವಾಪ್ಸಿ ಘೋಷಣೆಯ ಹಾಗೆ ಅವನ ದೇಹ ಮನೆಗೆ ಬಂದೇ ಬರುತ್ತದೆ ಎಂಬ ನಂಬಿಕೆ ಇತ್ತು ಮತ್ತು ದೇಹ ಬರುವ ಬಗ್ಗೆ ಕಾಣುತ್ತಿದ್ದ ಕನಸು ನನಸಾಗಿದೆ ಎಂದು ವಿಜಯಲಕ್ಷ್ಮಿ ಅವರು ಹೇಳುತ್ತಾರೆ.

ಒಬ್ಬ ಡಾಕ್ಟರ್ ಆಗಿ ಹಳ್ಳಿಗಳಲ್ಲಿ ಬಡವರರ ಸೇವೆ ಮಾಡಬೇಕೆನ್ನುವ ಆಸೆ ಅವನು ಇಟ್ಟುಕೊಂಡಿದ್ದ, ಅದರೆ ಅದು ಈಡೇರಲಿಲ್ಲ, ಅವನ ದೇಹವಾದರೂ ಅವರನಂತೆ ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಅದನ್ನು ದಾವಣಗೆರೆ ಮೆಡಿಕಲ್ ಕಾಲೇಜಿಗೆ ಡೊನೇಟ್ ಮಾಡತ್ತಿದ್ದೇವೆ ಎಂದು ಅವರು ಹೇಳಿದರು. ಅದಕ್ಕೂ ಮೊದಲು ಹಿಂದೂ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ದುಃಖತಪ್ತ ತಾಯಿ ಹೇಳಿದರು.

ಶೆಲ್ಲಿಂಗ್ ಬಲಿಯಾಗುವ ಮುನ್ನ ನವೀನ್ ತಾಯಿಯ ಜೊತೆ ಮಾತಾಡಿದ್ದರಂತೆ. ಅಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲೋ ದೂರದಲ್ಲಿ ಬಾಂಬ್ ಸಿಡಿದ ಸದ್ದು ಕೇಳುತ್ತಿದೆ, ನಾವು ಸೇಫ್ ಆಗಿದ್ದೇವೆ ಅಂತ ಅವರು ಅಮ್ಮನಿಗೆ ಹೇಳಿದ್ದರಂತೆ. ಅವನು ಊಟ ಸಿಗದೆ ಹಸಿದಿದ್ದ ವಿಷಯ ತಿಳಿದಾಗ ಕರುಳು ಕಿತ್ತು ಬಂದಂತಾಯಿತು ಎಂದು ಉಮ್ಮಳಿಸಿ ಬರುವ ದುಃಖವನ್ನು ತಡೆಯುತ್ತಾ ವಿಜಯಲಕ್ಷ್ಮಿ ಹೇಳುತ್ತಾರೆ.

‘ನನ್ನ ಮೇಲೆ ಅವನು ಜೀವವೇ ಇಟ್ಟುಕೊಂಡಿದ್ದ, ನನ್ನನ್ನು ಬಿಟ್ಟು ಒಂದು ನಿಮಿಷವೂ ಇದ್ದವನಲ್ಲ, ಹಾಗಾಗಿ ಅವನು ನನ್ನ ಪಾಲಿಗೆ ಸತ್ತಿಲ್ಲ, ನಾನು ಸಾಯುವರೆಗೆ ನವೀನ್ ನನ್ನಲ್ಲಿ ಬದುಕಿರುತ್ತಾನೆ,’ ಎಂದು ಅವರು ಗದ್ಗದಿತರಾಗಿ ಹೇಳುತ್ತಾರೆ.

ಇದನ್ನೂ ಓದಿ:  ನವೀನ್‌ ದೇಹ ಸೋಮವಾರ ಆಗಮನ: ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಶರೀರ ದಾನ -ನವೀನ್ ತಂದೆ ಶೇಖರಗೌಡ