ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು, ವಿಡಿಯೋ ವೈರಲ್​

| Updated By: ವಿವೇಕ ಬಿರಾದಾರ

Updated on: Sep 21, 2024 | 7:00 AM

ವಿಶ್ವವಿಖ್ಯಾತ ಮೈಸೂರು ದಸರಾಗೆ ತಯಾರಿ ಜೋರಾಗಿ ನಡೆದಿದೆ. ಈಗಾಗಲೆ ಅರಮನೆ ಆವರಣದಲ್ಲಿ ಆನೆಗಳು ಬೀಡುಬಿಟ್ಟಿವೆ. ತಾಲೀಮು ಕೂಡ ಆರಂಭವಾಗಿದೆ. ಈ ನಡುವೆ ಶುಕ್ರವಾರ ರಾತ್ರಿ ದಸರಾ ಆನೆಗಳ ನಡುವೆ ಕಾದಾಟ ನಡೆದಿರುವ ವಿಡಿಯೋ ವೈರಲ್​ ಆಗಿದೆ.

ಮೈಸೂರು ಅರಮನೆಯ ಆವರಣದಲ್ಲಿರುವ ದಸರಾ (Mysore Dasara) ಗಜಪಡೆಯ ಕಂಜನ್​​ ಹಾಗೂ ಧನಂಜಯ ಆನೆ ನಡುವೆ ಊಟ ಮಾಡುವಾಗ ಗಲಾಟೆ ನಡೆದಿದೆ.‌ ಆಕ್ರೋಶಗೊಂಡ ಧನಂಜಯ ಆನೆ ಕಂಜನ್ ಆನೆ‌ ಮೇಲೆ ದಾಳಿಗೆ ಮುಂದಾಗಿದೆ. ಇದರಿಂದ ಬೆದರಿದ ಕಂಜನ್ ಆನೆ ಮಾವುತನಿಲ್ಲದೆ ಅರಮನೆಯ ಜಯ ಮಾರ್ತಾಂಡ ಮುಖ್ಯ ದ್ವಾರದ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಆಚೆ ಓಡಿ ಬಂದಿದೆ. ಆದರೂ ಬೆನ್ನು ಬಿಡದ ಧನಂಜಯ ಆನೆ ಕಂಜನ್ ಆನೆಯನ್ನು ಅಟ್ಟಿಸಿಕೊಂಡು ಬಂದಿದೆ.

ಇದರಿಂದ ಮತ್ತಷ್ಟು ಬೆದರಿದ ಕಂಜನ್ ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ಜನರ ಬಳಿ‌ ಹೋಗಿದೆ. ಈ ವೇಳೆ ಧನಂಜಯ ಅನೆ ಮೇಲೆ ಇದ್ದ ಮಾವುತ ಧೈರ್ಯದಿಂದ ಸಮಯಪ್ರಜ್ಞೆಯಿಂದ ಕೋಪಗೊಂಡಿದ್ದ ಧನಂಜಯನನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಯಾವಾಗ ಧನಂಜಯ ಅಟ್ಟಾಡಿಸುವುದನ್ನು ನಿಲ್ಲಿಸಿತೋ ಬದುಕಿದೆಯಾ ಬಡ ಜೀವ ಅಂತ ಕಂಜನ್ ಆನೆ ಸಹಾ ನಿಂತುಕೊಂಡಿದೆ. ತಕ್ಷಣ ಕಂಜನ್ ಆನೆಯ‌ ಬಳಿ ತೆರಳಿದ ಮಾವುತ, ಕಂಜನ್ ಆನೆಯನ್ನು ಅರಮನೆ‌ ಒಳಗೆ ಕರೆ ತಂದಿದ್ದಾನೆ. ಈ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಮಾವುತರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬೆಟ್ಟದಂತೆ ಬಂದ ಸಮಸ್ಯೆ ಮಂಜಿನಂತೆ ಕರಗಿ ಎಲ್ಲರೂ ನೆಮ್ಮದಿಯ ನಿಟ್ಡುಸಿರು ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ