ಕನ್ನಡ ರಾಜ್ಯೋತ್ಸವ ವಿಶೇಷ: ಮೈಸೂರು ಅರಮನೆಯಲ್ಲಿರುವ ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರಿನಲ್ಲಿರುವ ಅಪರೂಪದ ಕನ್ನಡಾಂಬೆ ಭುವನೇಶ್ವರಿ ದೇಗುಲವು ಕನ್ನಡ ರಾಜ್ಯೋತ್ಸವ ಆಚರಣೆಗೆ ವಿಶೇಷ ಮಹತ್ವ ನೀಡಿದೆ. 1951ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಈ ದೇಗುಲದಲ್ಲಿ ಪ್ರತಿದಿನ ಪೂಜೆ ಪುನಸ್ಕಾರಗಳು ನಡೆಯುತ್ತವೆ. ರಾಜ್ಯೋತ್ಸವದಂದು ಇಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಸಭಾ ಕಾರ್ಯಕ್ರಮಗಳು ನಡೆಯುತ್ತವೆ. ಇದು ಮೈಸೂರಿನ ಸಾಂಸ್ಕೃತಿಕ ಹೆಗ್ಗುರುತು.
ನವೆಂಬರ್ ಬಂತೆಂದರೆ ಸಾಕು ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ. ಈ ಆಚರಣೆಗೆ ಮೈಸೂರಿನಲ್ಲಿ ತನ್ನದೇ ಆದ ಮಹತ್ವವಿದೆ. ಇದಕ್ಕೆ ಮುಖ್ಯ ಕಾರಣ ರಾಜ್ಯದಲ್ಲೇ ಅಪರೂಪದಲ್ಲಿ ಅಪರೂಪವಾದಂತಹ ಕನ್ನಡಾಂಬೆ ಭುವನೇಶ್ವರಿ ದೇಗುಲ ಮೈಸೂರು ಅರಮನೆಯ ಆವರಣದಲ್ಲಿರುವುದು. 1951ರಲ್ಲಿ ಅಂದಿನ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಈ ವಿಶೇಷ ದೇಗುಲವನ್ನು ಕನ್ನಡಾಂಬೆಗಾಗಿ ನಿರ್ಮಿಸಿದರು. ಅರಮನೆಯ ಒಳ ಮತ್ತು ಹೊರಭಾಗದಲ್ಲಿ 13ಕ್ಕೂ ಹೆಚ್ಚು ದೇಗುಲಗಳಿದ್ದರೂ, ಕನ್ನಡಾಂಬೆಗಾಗಿ ಒಂದು ಪ್ರತ್ಯೇಕ ದೇಗುಲ ಇರಬೇಕು ಎಂಬುದು ಒಡೆಯರ್ ಅವರ ಆಶಯವಾಗಿತ್ತು. ಖ್ಯಾತ ಶಿಲ್ಪಿ ಸಿದ್ದಲಿಂಗ ಸ್ವಾಮಿಗಳು ಆಕರ್ಷಕ ಭುವನೇಶ್ವರಿ ವಿಗ್ರಹವನ್ನು ಇಲ್ಲಿ ಕೆತ್ತಿದ್ದಾರೆ. ದೇವಾನು ದೇವತೆಗಳಿಗೆ ನಿತ್ಯ ಪೂಜೆ ಸಲ್ಲಿಸುವಂತೆಯೇ, ಕನ್ನಡಾಂಬೆಗೂ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯಬೇಕು ಎಂದು ಮಹಾರಾಜರು ಆಜ್ಞಾಪಿಸಿದರು. ಅಂದಿನಿಂದ ಇಂದಿನವರೆಗೂ ಈ ದೇಗುಲದಲ್ಲಿ ನಿತ್ಯವೂ ಅಭಿಷೇಕ, ಪೂಜೆಗಳು ನಡೆಯುತ್ತವೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
