ನಂಜನಗೂಡು: ಮಡುವಿನಹಳ್ಳಿ ಗ್ರಾಮದಲ್ಲಿ ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಹುಲಿ ಕಾಣಸಿಕೊಂಡಿದ್ದು, ಸ್ಥಳೀಯರ ಹಾಗೂ ರೈತರ ಆತಂಕಕ್ಕೆ ಕಾರಣವಾಗಿದೆ. ಮರಿಗಳೊಂದಿಗೆ ಹುಲಿ ಸಂಚರಿಸುತ್ತಿರುವ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ಇಲ್ಲಿನದ್ದಲ್ಲ. ಬೇರೆಯ ಕಡೆಯ ವಿಡಿಯೋವನ್ನು ಇಲ್ಲಿನದ್ದೆಂದು ವೈರಲ್ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಮೈಸೂರು, ಜನವರಿ 27: ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದ ಕೆರೆ ಬಳಿ ಮಧ್ಯರಾತ್ರಿ ವ್ಯಾಘ್ರನ ಘರ್ಜನೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಪ್ರದೇಶದಲ್ಲಿ ಮರಿಗಳ ಜೊತೆ ಹೆಣ್ಣು ಹುಲಿ ಕಾಣಿಸಿಕೊಳ್ಳುತ್ತಿದ್ದು, ಜಮೀನುಗಳಲ್ಲಿ ಕಾವಲು ಕಾಯುವ ರೈತರು ಎಚ್ಚರಿಕೆ ವಹಿಸಬೇಕಿದೆ ಎಂದು ವಿಡಿಯೋ ವೈರಲ್ ಆಗಿತ್ತು. ಆದರೆ, ಆ ಕುರಿತು ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮರಿಗಳ ಜೊತೆ ಹೆಣ್ಣು ಹುಲಿ ಸಂಚರಿಸುತ್ತಿರುವುದನ್ನು ಮಡುವಿನಹಳ್ಳಿ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದ ವಾಹನ ಸವಾರರು ಕಂಡಿದ್ದಾರೆ. ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ ಎನ್ನಲಾಗಿತ್ತು. ಈ ವಿಚಾರವನ್ನು ಗ್ರಾಮಸ್ಥರು ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಆ ಪ್ರದೇಶದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು?
ಕಳೆದ ಒಂದು ವಾರದ ಹಿಂದೆ ಗ್ರಾಮದ ಬಳಿ ಹಸುವಿನ ಮೇಲೆ ಹುಲಿ ದಾಳಿ ಮಾಡಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಗಸ್ತು ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಮತ್ತೆ ಹುಲಿ ಕಾಣಿಸಿಕೊಂಡಿಲ್ಲ. ಮೂರು ಹುಲಿಗಳು ಕಾಣಿಸಿಕೊಂಡ ವೀಡಿಯೋ ಆ ಗ್ರಾಮದ್ದಲ್ಲ. ಯಾವುದೇ ಬೇರೆ ಜಾಗದ ವೀಡಿಯೋವನ್ನು ವೈರಲ್ ಮಾಡಲಾಗಿದೆ. ಇದು ಆ ಗ್ರಾಮದ ವೀಡಿಯೋವಲ್ಲ. ಈ ಬಗ್ಗೆ ಜನರು ಆತಂಕಕೊಳಗಾಗಬಾರದು ಎಂದು ಬಂಡೀಪುರ ಹುಲಿರಕ್ಷಿತಾರಣ್ಯದ ಎಸಿಎಫ್ ಸತೀಶ್ ಕುಮಾರ್ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ