Video: ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸೇನಾ ಹೆಲಿಕಾಪ್ಟರ್‌ ಬಳಕೆ

Updated on: Jun 19, 2026 | 11:33 AM

ಜೂನ್ 21ರಂದು ದೇಶಾದ್ಯಂತ ನೀಟ್ ಯುಜಿ ಮರು ಪರೀಕ್ಷೆ ನಡೆಯಲಿದೆ. ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಂತರ, ಸೇನೆ, ಸಿಆರ್‌ಪಿಎಫ್ ಹಾಗೂ ಸಿಐಎಸ್‌ಎಫ್ ಭದ್ರತೆಯಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಹೆಲಿಕಾಪ್ಟರ್‌ ಮೂಲಕ ಸಾಗಿಸಲಾಗಿದೆ. ಬಯೋಮೆಟ್ರಿಕ್ ವ್ಯವಸ್ಥೆ ಮತ್ತು ಹೆಚ್ಚುವರಿ 15 ನಿಮಿಷಗಳ ಸಮಯವನ್ನು ನೀಡಲಾಗಿದೆ.

ಜೂನ್ 21ರಂದು ದೇಶಾದ್ಯಂತ ನೀಟ್ ಯುಜಿ (NEET UG) ಮರು ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಜ್ಜಾಗಿದೆ. ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ, ಈ ಬಾರಿ ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ 2:30 ರಿಂದ ಸಂಜೆ 5:15 ರವರೆಗೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ 15 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ.

552 ನಗರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸೇನೆಯ ಹೆಲಿಕಾಪ್ಟರ್‌ ಮತ್ತು ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ಸಿಆರ್‌ಪಿಎಫ್ (CRPF) ಮತ್ತು ಸಿಐಎಸ್‌ಎಫ್ (CISF) ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಾಗಿಸಿ, ಅವುಗಳನ್ನು ಸಂಗ್ರಹಿಸುವ ಸ್ಥಳಗಳಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ. ನಕಲಿ ಅಭ್ಯರ್ಥಿಗಳನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರಶ್ನೆಪತ್ರಿಕೆ ತಯಾರಿಕೆಯಲ್ಲಿ ಭಾಗಿಯಾದ ಪ್ರೊಫೆಸರ್‌ಗಳಿಗೆ ಪರೀಕ್ಷೆ ಮುಗಿಯುವವರೆಗೆ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಈ ಎಲ್ಲಾ ಕ್ರಮಗಳು ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶ ಹೊಂದಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 19, 2026 11:32 AM
Follow Us