ಸುಮಾರು 350 ಕಾರುಗಳಲ್ಲಿ ಕಾರ್ಯಕರ್ತರು ಮತ್ತು ಮಠಾಧೀಶರೊಂದಿಗೆ ಧರ್ಮಸ್ಥಳಕ್ಕೆ ಜಾಥಾ ಹೊರಟ ನೆಲಮಂಗಲ ಕಾಂಗ್ರೆಸ್ ಶಾಸಕ

Updated on: Aug 23, 2025 | 8:01 PM

ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿದರೂ ಎಲ್ಲ 9 ಮಠಗಳ ಶ್ರೀಗಳು ತನಗೆ ಸಹಕಾರ ನೀಡಿದ್ದಾರೆ, ಕೇವಲ ಧರ್ಮಸ್ಥಳ ಯಾತ್ರೆ ಮಾತ್ರ ಅಂತಲ್ಲ, ಸಿದ್ದಗಂಗಾ ಮಠದ ಶ್ರೀಗಳು ಸಹ ಬರಬೇಕಿತ್ತು, ಇವತ್ತು ಅಮವಾಸ್ಯೆಯಾಗಿರುವ ಕಾರಣ ಅವರು ಧಾರ್ಮಿಕ ಕಾರ್ಯಗಳು ಹಾಗೂ ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ, ಅದರೆ ಅವರು ನಮ್ಮನ್ನೆಲ್ಲ ಹರಸಿ ಆಶೀರ್ವದಿಸಿದ್ದಾರೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು.

ನೆಲಮಂಗಲ, ಆಗಸ್ಟ್ 23: ಮೊದಲಿಗೆ ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ್ (BJP MLA SR Vishwanath) ಕಾರುಗಳಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಧಾರ್ಮಿಕ ಕೇಂದ್ರದೊಂದಿಗೆ ಸಮಗ್ರತೆ ಪ್ರದರ್ಶಿಸಲು ಯಲಹಂಕದಲ್ಲಿ ಕರೆ ನೀಡಿದರು. ಆಮೇಲೆ ವಕೀಲರ ತಂಡ ಇದೇ ನೆಲಮಂಗಲದಿಂದ ಧರ್ಮಸ್ಥಳಕ್ಕೆ ಜಾಥಾ ಹೊರಟಿತು. ಈಗ ಸ್ಥಳೀಯ ಕಾಂಗ್ರೆಸ್ ಶಾಸಕ ಎನ್ ಶ್ರೀನಿವಾಸ್ ಅವರ ಸರದಿ. ಅವರು ನೀಡಿದ ಕರೆಗೆ 350 ಕ್ಕೂ ಹೆಚ್ಚು ಕಾರುಗಳು ಧರ್ಮಸ್ಥಳಕ್ಕೆ ಹೊರಡಲು ಅಣಿಯಾಗಿವೆ. ನಮ್ಮ ನೆಲಮಂಗಲ ವರದಿಗಾರನೊಂದಿಗೆ ಮಾತಾಡಿರುವ ಶ್ರೀನಿವಾಸ್, ಕೆಲ ದುಷ್ಟಶಕ್ತಿಗಳು ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳಕ್ಕೆ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡಿವೆ, ಆದರೆ ಮಂಜುನಾಥ ಸ್ವಾಮಿಯ ಸ್ಥಳಕ್ಕೆ ಕೆಟ್ಟ ಹೆಸರು ಬರಲು ನಾವು ಬಿಡಲ್ಲ, ನಾನು ನೀಡಿದ ಕರೆಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ, ನೆಲಮಂಗಲ ಕ್ಷೇತ್ರದ ಜನ ಯಾವತ್ತಿಗೂ ಧರ್ಮಸ್ಥಳದೊಂದಿಗಿದ್ದಾರೆ ಅನ್ನೋದನ್ನು ಇದು ಸೂಚಿಸುತ್ತದೆ, ನನಗೆ ಬಹಳ ಸಂತೋಷವೆನಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:  ಧರ್ಮಸ್ಥಳ ಪ್ರಕರಣ: ಮಾಸ್ಕ್​​​ಮ್ಯಾನ್​​ ಸಿಎನ್ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ