ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ ತಾಲೂಕಿನ ಗೋರಿನಬೆಲೆ ಗ್ರಾಮದ ರಸ್ತೆಯನ್ನು ಜಮೀನ್ದಾರರು ಅಗೆದು ಹಾಳು ಮಾಡಿದ್ದಾರೆ. ಇದರಿಂದ ಗೋರಿನಬೆಲೆ, ಗುರುವನಹಳ್ಳಿ, ವಸಂತನಗರ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಭೂಮಾಲೀಕರು ರಸ್ತೆಯನ್ನು ಬಿಟ್ಟುಕೊಡಲು ಸಿದ್ಧರಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಕಂದಾಯ ಮಂತ್ರಿಗಳ ಫೋಟೋಗೆ ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಚೆನ್ನಾಗಿದ್ದ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಗೋರಿನಬೆಲೆ ಗ್ರಾಮದಿಂದ ಭಟ್ಟರಹಳ್ಳಿ ಮತ್ತು ನೆಲಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜಮೀನ್ದಾರರು ಅಗೆದು ಹಳ್ಳ ತೋಡಿದ್ದಾರೆ. ಇದರಿಂದ ಗೋರಿನಬೆಲೆ, ಗುರುವನಹಳ್ಳಿ, ವಸಂತನಗರ ಗ್ರಾಮಸ್ಥರು ನೆಲಮಂಗಲಕ್ಕೆ ತೆರಳಲು ಪರದಾಡುತ್ತಿದ್ದಾರೆ. ಇದರಿಂದ, ಅಸಮಾಧಾನಗೊಂಡಿರುವ ಗ್ರಾಮಸ್ಥರು ಸಮಸ್ಯೆ ಬಗೆಹರಿಸುವಂತೆ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಪೋಟೋಗೆ ಪೂಜೆ ಸಲ್ಲಿಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮನಂಜಯ್ಯ, ನರಸಿಂಹಮೂರ್ತಿ, ಜಯಪ್ರಕಾಶ್ ಮತ್ತು ಬಾಲಕೃಷ್ಣ ಎಂಬ ಜಮೀನ್ದಾರರು ಚೆನ್ನಾಗಿದ್ದ ಸರ್ಕಾರಿ ಕಾಂಕ್ರೀಟ್ ರಸ್ತೆಗೆ ಹಳ್ಳ ತೋಡಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾರೆ. ಇದನ್ನು ಕಂಡು ಕಾಣದಂತೆ ತಾಲೂಕು ರೆವಿನ್ಯೂ ಅಧಿಕಾರಿಗಳು ಕೂತಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗ್ರಾಮಸ್ಥರು ಹೇಳುವ ಪ್ರಕಾರ, ದಾಖಲೆಗಳ ಪ್ರಕಾರ ಸಾರ್ವಜನಿಕ ರಸ್ತೆ ಬೇರೆ ಕಡೆ ಇದೆ. ಅಭಿವೃದ್ಧಿ ಪಡಿಸಿದ ರಸ್ತೆ ನಮಗೆ ಸೇರಿದ್ದು, 30 ವರ್ಷಗಳ ಹಿಂದೆ ಅನುಮತಿ ಮೇಲೆ ಬಿಡಲಾಗಿತ್ತು. ನಕಾಶೆಯಲ್ಲಿ ರಸ್ತೆ ನಮ್ಮ ಹೆಸರಿಗೆ ಅಧಿಕಾರಿಗಳು ಮಾಡಿಕೊಟ್ಟಿದ್ದಾರೆ. ಇನ್ನು, ರಸ್ತೆಯ ಭೂಮಾಲೀಕ ಮನಂಜಯ್ಯ ಜನರಿಗಾಗಿ ಅಭಿವೃದ್ಧಿ ಪಡಿಸಿದ ರಸ್ತೆ ಬಿಟ್ಟು ಕೊಡುತ್ತೇನೆ ಎಂದು ಹೇಳಿದ್ದಾರೆ.