“ನೀವು ಬರ್ತೀರಿ ಅಂತ ಅಪ್ಪ ಕಾರು ಬಚ್ಚಿಟ್ಟಿದ್ದಾರೆ”: ಪೊಲೀಸರ ಮುಂದೆ ತಂದೆಯ ಗುಟ್ಟು ರಟ್ಟು ಮಾಡಿದ 6 ವರ್ಷದ ಮಗ
ನೆಲ್ಲೂರು ಜಿಲ್ಲೆಯ ಅನಂತಸಾಗರ ಗ್ರಾಮದಲ್ಲಿ ನಡೆದ ಸ್ವಾರಸ್ಯಕರ ಘಟನೆ ಇದು. ಪೊಲೀಸರು ವಾಹನ ದಾಖಲೆ ಪರಿಶೀಲನೆಗೆ ಬರುತ್ತಿದ್ದಾರೆಂದು ತಿಳಿದು, ದಾಖಲೆಗಳಿಲ್ಲದ ತನ್ನ ಕಾರನ್ನು ತಂದೆಯೊಬ್ಬರು ಬಚ್ಚಿಟ್ಟಿದ್ದರು. ಆದರೆ, ಅವರ 6 ವರ್ಷದ ಮಗ ಮಹೇಂದ್ರ ಮುಗ್ಧವಾಗಿ ಪೊಲೀಸರಿಗೆ ಕಾರು ಅಡಗಿಸಿದ ಸ್ಥಳ ತೋರಿಸಿ ತಂದೆಯನ್ನು ಸಿಕ್ಕಿಹಾಕಿದನು. ಈ ಘಟನೆ ಸ್ಥಳೀಯರ ಮುಖದಲ್ಲಿ ನಗು ಮೂಡಿಸಿ, ಕಾನೂನು ಪಾಲನೆಯ ಮಹತ್ವವನ್ನು ಸಾರಿದೆ.
ನೆಲ್ಲೂರು, ಆ.21: ಪೊಲೀಸರು ಪರಿಶೀಲನೆಗೆ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿ, ದಾಖಲೆಗಳಿಲ್ಲದ ತನ್ನ ಕಾರನ್ನು ಸೈಡ್ ರಸ್ತೆಯ ಮನೆಯೊಂದರಲ್ಲಿ ಬಚ್ಚಿಟ್ಟಿದ್ದ ತಂದೆಗೆ 6 ವರ್ಷದ ಸ್ವಂತ ಮಗನೇ ಶಾಕ್ ನೀಡಿದ ಸ್ವಾರಸ್ಯಕರ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ನೆಲ್ಲೂರು ಜಿಲ್ಲೆಯ ಅನಂತಸಾಗರ ಗ್ರಾಮದಲ್ಲಿ ಪೊಲೀಸರು ನಿಯಮಿತ ತಪಾಸಣೆಯ ಭಾಗವಾಗಿ ಮನೆ ಮನೆಗೂ ತೆರಳಿ ವಾಹನಗಳ ದಾಖಲೆಗಳನ್ನು (RTO Documents) ಪರಿಶೀಲಿಸುತ್ತಿದ್ದರು. ಗ್ರಾಮದ ನಿವಾಸಿ ಸುರೇಶ್ ಎಂಬಾತ ತನ್ನ ವಾಹನಕ್ಕೆ ಸರಿಯಾದ ದಾಖಲೆಗಳಿಲ್ಲದ ಕಾರಣ, ಪೊಲೀಸರಿಗೆ ಸಿಕ್ಕಿಬಿದ್ದರೆ ದಂಡ ಬೀಳುತ್ತದೆ ಎಂಬ ಭಯದಿಂದ ತಕ್ಷಣವೇ ತನ್ನ ವಾಹನವನ್ನು ಪಕ್ಕದ ಬೀದಿಯಲ್ಲಿದ್ದ ಮನೆಯೊಂದರಲ್ಲಿ ಅಡಗಿಸಿಟ್ಟು ಬಂದಿದ್ದನು. ಪೊಲೀಸರು ಸುರೇಶ್ ಅವರ ಮನೆಗೆ ತಪಾಸಣೆಗೆ ಬಂದಾಗ, ಸುರೇಶ್ ಅವರ 6 ವರ್ಷದ ಮಗ ಮಹೇಂದ್ರ ಮುಗ್ಧವಾಗಿ ಪೊಲೀಸರ ಬಳಿ ಬಂದು “ನೀವು ಬರ್ತಿದ್ದೀರಿ ಅಂತಾನೇ ನಮ್ಮ ಅಪ್ಪ ಕಾರು ಅಡಗಿಸಿಟ್ಟಿದ್ದಾರೆ” ಎಂದು ಹೇಳಿ ಪೊಲೀಸರನ್ನು ನೇರವಾಗಿ ವಾಹನ ನಿಲ್ಲಿಸಿದ್ದ ಜಾಗಕ್ಕೇ ಕರೆದುಕೊಂಡು ಹೋಗಿದ್ದಾನೆ. ಆರನೇ ತರಗತಿಯ ಮಗನ ಮುಗ್ಧ ಮಾತು ಹಾಗೂ ತಂದೆಯ ಸಿಕ್ಕಿಬಿದ್ದ ಮುಖ ನೋಡಿ ಪೊಲೀಸರು ಮತ್ತು ಸ್ಥಳೀಯರು ಒಂದು ಕ್ಷಣ ನಸುನಕ್ಕಿದ್ದಾರೆ. ಮಗನ ಮುಗ್ಧತೆಯಿಂದಾಗಿ ಕೊನೆಗೂ ಸುರೇಶ್ ಪೊಲೀಸರಿಗೆ ಸಿಕ್ಕಿಬೀಳುವಂತಾಯಿತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

