‘ಮುಂದಿನ ಸಿಎಂ ಡಿಕೆ ಶಿವಕುಮಾರ್’: ಬೆಳಗಾವಿಯಲ್ಲಿ ಮೊಳಗಿತು ಘೋಷಣೆ
ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ಅವರ ಮಗ, ಎಂಎಲ್ಸಿ ಯತೀಂದ್ರ ಹೇಳಿರುವುದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರನ್ನು ಕೆರಳಿಸಿದಂತಿದೆ. ಚಳಿಗಾಲದ ಅಧಿವೇಶನಕ್ಕೆಂದು ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಡಿಕೆ ಶಿವಕುಮಾರ್ ಆಗಮಿಸಿದಾಗ ಅವರ ಬೆಂಬಲಿಗರು, ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಕೂಗಿದ್ದಾರೆ.
ಬೆಳಗಾವಿ, ಡಿಸೆಂಬರ್ 9: ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ಬೆಳಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಅವರ ಬೆಂಬಲಿಗರು, ‘‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ’’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿ ಅವಧಿ ಪೂರೈಸಲಿದ್ದಾರೆ ಎಂದು ಅವರ ಪುತ್ರ ಯತೀಂದ್ರ ಸೋಮವಾರ ಬೆಳಗಾವಿಯಲ್ಲಿ ಹೇಳಿದ್ದರು. ಅದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಪರ ಘೋಷಣೆ ಮೊಳಗಿದೆ.
ಏತನ್ಮಧ್ಯೆ, ಬೆಳಗಾವಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಎಂಎಲ್ಸಿ ಚನ್ನರಾಜ್, ‘ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್’ ಎಂದು ಉಲ್ಲೇಖಿಸಿರುವುದು ಗಮನ ಸೆಳೆದಿದೆ. ಎಂಎಲ್ಸಿ ಚನ್ನರಾಜ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಆಗಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ ಬಗ್ಗೆ ವ್ಯಾಪಕ ಚರ್ಚೆ ಶುರುವಾಗುತ್ತಿದ್ದಂತೆಯೇ ಚನ್ನರಾಜ್ ಅದನ್ನು ತಿದ್ದುಪಡಿ ಮಾಡಿದ್ದಾರೆ.
ಇನ್ನು ಬೆಳಗಾವಿಗೆ ಹೊರಡುವ ಮುನ್ನ ಯತೀಂದ್ರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ‘ಬಹಳ ಸಂತೋಷ, ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ’ ಎಂದು ಹೇಳಿದ್ದಾರೆ.
