ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿ ಮುಂದೆಯೇ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರನ್ನು ಅಸ್ಸಾಂ ಚುನಾವಣೆಗೆ ಹಿರಿಯ ವೀಕ್ಷಕರನ್ನಾಗಿ ನೇಮಿಸಿದೆ. ಈ ನಡೆ ನಾಯಕತ್ವ ಬದಲಾವಣೆ ಚರ್ಚೆಗೆ ತಾತ್ಕಾಲಿಕ ವಿರಾಮ ನೀಡುವ ಪರೋಕ್ಷ ಸಂದೇಶ ಇರಬಹುದೆಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ನಡೆದಿವೆ.
ಬೆಂಗಳೂರು, ಜನವರಿ 8: ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆಗಳು ಮೊಳಗಿವೆ. ಕಾರ್ಯಕರ್ತರು, ‘‘ಮುಂದಿನ ಸಿಎಂ ಡಿಕೆ ಶಿವಕುಮಾರ್ ಸಾಹೇಬ್ರಿಗೆ ಜೈ’’ ಎಂದು ಘೋಷಣೆ ಕೂಗಿ ಜೈಕಾರ ಹಾಕಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರನ್ನು ಅಸ್ಸಾಂ ಚುನಾವಣೆಗೆ ಹಿರಿಯ ವೀಕ್ಷಕರನ್ನಾಗಿ ನೇಮಿಸಿದೆ. ಈ ನಿರ್ಧಾರ, ನಾಯಕತ್ವ ಬದಲಾವಣೆಯ ಕುರಿತ ಚರ್ಚೆಗಳಿಗೆ ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ವಿರಾಮ ನೀಡುವ ಪರೋಕ್ಷ ಸಂದೇಶ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಡಿಕೆ ಶಿವಕುಮಾರ್ ಕೂಡ ‘ನಾನು ಶಿಸ್ತಿನ ಸಿಪಾಯಿ, ಪಕ್ಷ ಹೇಳಿದಂತೆ ಕೇಳುತ್ತೇನೆ’ ಎಂದು ಹೇಳಿರುವುದು ಈ ಸಂದೇಶಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಕಾರ್ಯಕರ್ತರಲ್ಲಿ ಹುರುಪಿದ್ದರೂ, ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗೆ ಹಿಂಜರಿಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
