ಶಿವಕುಮಾರ ಅವರನ್ನು ಯಾರೂ ಬಿಜೆಪಿಗೆ ಆಹ್ವಾನಿಸಿಲ್ಲ, ಅವರು ಹೇಳುತ್ತಿರೋದು ಶುದ್ಧ ಸುಳ್ಳು: ಆರ್ ಅಶೋಕ
ಕಳೆದ ಮೂರು ವರ್ಷಗಳಿಂದ ನಾವು ಅವರಿಗೆ ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇವೆ. ನಮ್ಮ ಬಿಜೆಪಿ ನಾಯಕರು ಅವರನ್ನು ಕರೆದಿದ್ದರೆ ಶಿವಕುಮಾರವರು ಆ ಮಹಾನುಭಾವನ ಹೆಸರು ಹೇಳಲಿ. ಹೆಸರು ಹೇಳಲು ಅವರಿಗೇನು ಕಷ್ಟ? ಅದರಿಂದ ಅವರಿಗೆ ನಷ್ಟವೇನೂ ಇಲ್ಲ ತಾನೆ? ಎಂದು ಅಶೋಕ ಹೇಳಿದರು.
Bidar: ಎರಡೂವರೆ ವರ್ಷಗಳ ಹಿಂದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರನ್ನು ಜೈಲಿಗೆ ಹೋಗುವಂತೆ ಮಾಡಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣ ಪುನಃ ಜೀವ ತಳೆದಿದೆ. ಗುರುವಾರದಂದು ಜಾರಿ ನಿರ್ದೇಶನಾಲಯ (ED) ಮತ್ತೊಂದು ಚಾರ್ಜ್ ಶೀಟನ್ನು ಶಿವಕುಮಾರ ವಿರುದ್ಧ ದಾಖಲಿಸಿದೆ. ಅವರು ವಿರುದ್ಧ ಪ್ರಕರಣ ದಾಖಲಾದಾಗ ಡಿಕೆಶಿ ಅವರು, ಬಿಜೆಪಿ ಸೇರುವಂತೆ ನೀಡಿದ ಅಹ್ವಾನವನ್ನು ತಿರಸ್ಕರಿಸಿದ್ದಕ್ಕೆ ಹೀಗೆ ಮಾಡಲಾಗುತ್ತಿದೆ ಅಂತ ಅವರು ಹೇಳಿದ್ದರು. ಶುಕ್ರವಾರ ಬೀದರ್ ಜಿಲ್ಲೆ ಪ್ರವಾಸದಲ್ಲಿದ್ದ ಕಂದಾಯ ಸಚಿವ ಆರ್ ಅಶೋಕ (R Ashoka) ಅವರಿಗೆ ಇದೇ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದರು. ಶಿವಕುಮಾರ ಹೇಳುತ್ತಿರುವುದು ಶುದ್ಧ ಸುಳ್ಳು ಅಂತ ಅಶೋಕ ಹೇಳಿದರು.
ಕಳೆದ ಮೂರು ವರ್ಷಗಳಿಂದ ನಾವು ಅವರಿಗೆ ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇವೆ. ನಮ್ಮ ಬಿಜೆಪಿ ನಾಯಕರು ಅವರನ್ನು ಕರೆದಿದ್ದರೆ ಶಿವಕುಮಾರವರು ಆ ಮಹಾನುಭಾವನ ಹೆಸರು ಹೇಳಲಿ. ಹೆಸರು ಹೇಳಲು ಅವರಿಗೇನು ಕಷ್ಟ? ಅದರಿಂದ ಅವರಿಗೆ ನಷ್ಟವೇನೂ ಇಲ್ಲ ತಾನೆ? ನಾನಂದುಕೊಳ್ಳುವ ಹಾಗೆ ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಸಿಬಿಐ, ಆದಾಯ ತೆರಿಗೆ ಮತ್ತು ಈಡಿ ದಾಳಿ ಎಲ್ಲ ಪಕ್ಷಗಳ ನಾಯಕರ ವಿರುದ್ಧ ಆಗುತ್ತವೆ. ಬಿಜೆಪಿ ನಾಯಕರ ವಿರುದ್ಧ ಸಾವಿರಾರು ದಾಳಿಗಳಾಗಿವೆ ಎಂದು ಆಶೋಕ ಹೇಳಿದರು.
ಕಾನೂನಿನ ಪ್ರಕ್ರಿಯೆ ಅಗಿರುವುದರಿಂದ ಅವರು ನ್ಯಾಯಾಲಯದ ಮೂಲಕವೇ ಹೋರಾಟ ನಡೆಸಬೇಕು. ಕೋರ್ಟ್ನಲ್ಲಿ ಅವರು ತಪ್ಪಿತಸ್ಥರಲ್ಲ ಅಂತ ಸಾಬೀತಾದರೆ ಜಯ ಅವರದ್ದೇ, ಇಲ್ಲ ಅಂತಾದರೆ ಸಮಸ್ಯೆ ಆಗುತ್ತದೆ. ವಿಷಯ ಅಷ್ಟೇ. ಬಿಜೆಪಿ ಸೇರದೆ ಹೋಗಿದ್ದಕ್ಕೆ ಇದನ್ನೆಲ್ಲ ಮಾಡಿಸಲಾಗುತ್ತಿದೆ ಅಂತ ಅವರು ಹೇಳಿತ್ತಿರುವುದು ಶುದ್ಧ ಸುಳ್ಳು, ಹಿಂದೆ ಯಾರೂ ಅವರನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ ಮುಂದೆಯೂ ಆಹ್ವಾನಿಸುವುದಿಲ್ಲ ಅಂತ ಅಶೋಕ ಹೇಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.