ಸಚಿವ ಸಂಪುಟ ವಿಸ್ತರಣೆ ಸಿಕ್ಕಿಲ್ಲ ಹಸಿರು ನಿಶಾನೆ, ಅದರೆ ತಮ್ಮ ದೆಹಲಿ ಭೇಟಿ ಫಲಪ್ರದ ಎನ್ನುತ್ತಾರೆ ಮುಖ್ಯಮಂತ್ರಿ ಬೊಮ್ಮಾಯಿ
ರಾಜ್ಯದ ಅಭಿವೃದ್ಧಿ ವಿಷಯಗಳನ್ನು ವರಿಷ್ಠರೊಂದಿಗೆ ಚರ್ಚಿಸುವ ಉದ್ದೇಶದಿಂದ ತಾವು ದೆಹಲಿಗೆ ಬಂದಿದ್ದು ಎಂದು ಹೇಳಿದ ಮುಖ್ಯಮಂತ್ರಿಗಳು, ಬಿಜೆಪಿಯ 42ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದರು.
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆಗೆ ಮೊದಲು ಸಚಿವರಾಗಬೇಕು ಅಂತ ಆಸೆ ಇಟ್ಟುಕೊಂಡಿದ್ದ ರಾಜ್ಯ ಬಿಜೆಪಿ ಶಾಸಕರು (BJP MLAs) ಮತ್ತಷ್ಟು ದಿನ ಕಾಯಬೇಕಿದೆ. ನವದೆಹೆಲಯಲ್ಲಿ ಬುಧವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ವಿಷಯವನ್ನು ಸ್ಥೂಲವಾಗಿ ಚರ್ಚಿಸಿರುವುದಾಗಿ ಹೇಳುತ್ತಿರುವರಾದರೂ ಅದಕ್ಕೆ ಗ್ರೀನ್ ಸಿಗ್ನಲ್ ಮಾತ್ರ ಸಿಕ್ಕಿಲ್ಲ. ನಡ್ಡಾ ಅವರು ಸದರಿ ವಿಷಯವನ್ನು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಬೊಮ್ಮಾಯಿ ಅವರಿಗೆ ಇನ್ನೊಮ್ಮೆ ಬೆಂಗಳೂರಿಗೆ ಬರಲು ಹೇಳುವರಂತೆ. ಅದರರ್ಥ ಮಂತ್ರಿಯಾಗುವ ಆಸೆ ಇಟ್ಟುಕೊಂಡಿರುವ ಶಾಸಕರು ಇನ್ನೆರಡು-ಮೂರು ವಾರಗಳವರೆಗೆ ಕಾಯದೆ ವಿಧಿಯಿಲ್ಲ. ದೆಹಲಿಯಲ್ಲಿ ಬುಧವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತಾಡಿದ ಮುಖ್ಯಮಂತ್ರಿಗಳು ತಮ್ಮ ದೆಹಲಿ ಪ್ರವಾಸ ಫಲಪ್ರದವಾಗಿದೆ ಎಂದು ಹೇಳಿದರು.
ರಾಜ್ಯ ರಾಜಕಾರಣ, ಅಲ್ಲಿನ ವಿದ್ಯಮಾನಗಳನ್ನು ನಡ್ಡಾ ಆವರ ಗಮನಕ್ಕೆ ತರಲಾಗಿದೆ ಮತ್ತು ಈ ತಿಂಗಳು 16 ಮತ್ತು 17ರಂದು ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಿ ಮುಂಬರುವ ಚುನಾವಣೆಯ ಬಗ್ಗೆ ತಯಾರಿ ನಡೆಸುವ ಕುರಿತು ತೀರ್ಮಾನಗಳನ್ನು ತೆಗೆದುಕೊಳ್ಳಲು ನಡ್ಡಾ ಸೂಚನೆ ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ರಾಜ್ಯದ ಅಭಿವೃದ್ಧಿ ವಿಷಯಗಳನ್ನು ವರಿಷ್ಠರೊಂದಿಗೆ ಚರ್ಚಿಸುವ ಉದ್ದೇಶದಿಂದ ತಾವು ದೆಹಲಿಗೆ ಬಂದಿದ್ದು ಎಂದು ಹೇಳಿದ ಮುಖ್ಯಮಂತ್ರಿಗಳು, ಬಿಜೆಪಿಯ 42ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದರು. ನಡ್ಡಾ ಅವರಲ್ಲದೆ, ಸಚಿವರಾದ ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ ಬೊಮ್ಮಾಯಿ, ಅವರು ಅಮಿತ್ ಶಾ ಅವರನ್ನು ಭೇಟಿಯಾಗುವುದು ಸಾಧ್ಯವಾಗಲಿಲ್ಲ ಎಂದರು.
ಬೆಂಗಳೂರಿಗೆ ವಾಪಸ್ಸು ಹೋದಮೇಲೆ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಆರಂಭಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು. ಪರಿಸರ, ಜಲಶಕ್ತಿ ಮತ್ತು ಇಂಧನ ಮಂತ್ರಾಲಯಗಳೊಂದಿಗೆ ಚರ್ಚೆ ನಡೆಸಿದ್ದು ಒಟ್ಟಾರೆಯಾಗಿ ತಮ್ಮ ಭೇಟಿ ಫಲಫ್ರದವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದೆಹಲಿಗೆ ಬಿಜೆಪಿ ವರಿಷ್ಠರು ನನ್ನನ್ನು ಕರೆಸಿಲ್ಲ, ನಾನೇ ಜೆ.ಪಿ.ನಡ್ಡಾ, ಅಮಿತ್ ಶಾರನ್ನು ಭೇಟಿಯಾಗುತ್ತೇನೆ: ಬಸವರಾಜ ಬೊಮ್ಮಾಯಿ