ಸಿಎಂ ಡಿಕೆ ಶಿವಕುಮಾರ್​ಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ

Updated on: Jun 11, 2026 | 12:57 PM

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಸದ್ಯಕ್ಕೆ ಯಾವುದೇ ಕಂಟಕವಿಲ್ಲ ಎಂದು ನೊಣವಿನಕೆರೆ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತುಮಕೂರಿನಲ್ಲಿ ಹೇಳಿದ್ದಾರೆ. ಗುರುವಿನ ಆಶೀರ್ವಾದ ಸದಾ ಡಿಕೆ ಶಿವಕುಮಾರ್‌ ಅವರಿಗೆ ರಕ್ಷಾಕವಚವಾಗಿದೆ. ಡಿಕೆ ಶಿವಕುಮಾರ್ ಅವರ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲಿವೆ ಎಂದು ಸ್ವಾಮೀಜಿ ಅಭಯ ನೀಡಿದ್ದಾರೆ.

ತುಮಕೂರು, ಜೂನ್ 11: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಯಾವುದೇ ರೀತಿಯಾದ ಕಂಟಕವಿಲ್ಲ ಎಂದು ನೊಣವಿನಕೆರೆ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಭವಿಷ್ಯ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರೊಬ್ಬರ ಮನೆಗೆ ಪಾದಪೂಜೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸ್ವಾಮೀಜಿ ಈ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್‌ ಗುರುವಿನ ಆಶೀರ್ವಾದ ಪಡೆದಿದ್ದು, ನಿರಂತರವಾಗಿ ಶ್ರೀಮಠದ ಮಗನಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಗುರುವಿನ ಆಶೀರ್ವಾದ ಅವರಿಗೆ ರಕ್ಷಾಕವಚವಾಗಿದೆ. ಯಾವುದೇ ಕಂಟಕ ಬಂದರೂ ಅವರು ಜಯಶೀಲರಾಗುತ್ತಾರೆ. ಒಂಭತ್ತು ತಿಂಗಳ ಕಂಟಕದ ಬಗ್ಗೆ ಚಿಂತೆ ಬೇಡ. ಗುರುವಿನ ರಕ್ಷಣೆಯಿಂದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲಿವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಡಿಕೆ ಶಿವಕುಮಾರ್‌ ರೈತರು, ಬಡವರು, ಸೈನಿಕರು, ವರ್ತಕರು ಮತ್ತು ಯುವಕರಿಗಾಗಿ ಕಂಕಣಬದ್ಧರಾಗಿ ಸೇವೆ ಸಲ್ಲಿಸಲಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಂತ್ರದೊಂದಿಗೆ ಶ್ರೀಮಠದಿಂದ ಅವರಿಗೆ ಧರ್ಮದ ದಂಡವನ್ನು ಹಸ್ತಾಂತರಿಸಲಾಗಿದೆ. ಅವರು ಸಮಾಜದ ಸೇವೆಯಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 11, 2026 12:56 PM
Follow Us