ಗಣೇಶ ಹಬ್ಬಕ್ಕೆ ಡಿಪೋ, ವರ್ಕ್ ಶಾಪ್, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ

Edited By:

Updated on: Sep 16, 2026 | 3:35 PM

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಗಣೇಶ ಹಬ್ಬದ ಸಂದರ್ಭದಲ್ಲಿ ಡಿಪೋ, ವರ್ಕ್ ಶಾಪ್ ಮತ್ತು ಬಸ್ ನಿಲ್ದಾಣಗಳಲ್ಲಿ ಕಟ್ಟಿಗೆ ಅಥವಾ ಗ್ಯಾಸ್ ಬಳಸಿ ಪ್ರಸಾದ ತಯಾರಿಸುವುದನ್ನು ನಿಷೇಧಿಸಿದೆ. ಅಗ್ನಿ ಸುರಕ್ಷತಾ ಕಾರಣಗಳನ್ನು ನೀಡಿರುವ ಈ ಆದೇಶವು ಹಲವು ವರ್ಷಗಳ ಸಂಪ್ರದಾಯಕ್ಕೆ ಅಡ್ಡಿಯಾಗಿದೆ. ಇದರಿಂದ ಸಿಬ್ಬಂದಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸದ್ಯ ಈ ಕುರಿತು ವಿವಾದ ಭುಗಿಲೆದ್ದಿದೆ.

ಹುಬ್ಬಳ್ಳಿ, ಸೆಪ್ಟೆಂಬರ್ 16: ಹುಬ್ಬಳ್ಳಿಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ. ಸಂಸ್ಥೆಯ ಡಿಪೋ, ವರ್ಕ್ ಶಾಪ್‌ ಹಾಗೂ ಬಸ್ ನಿಲ್ದಾಣಗಳಲ್ಲಿ ಕಟ್ಟಿಗೆ ಮತ್ತು ಗ್ಯಾಸ್ ಬಳಸಿ ಪ್ರಸಾದ ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಗ್ನಿ ಸುರಕ್ಷತಾ ಕ್ರಮಗಳ ಭಾಗವಾಗಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವರ್ಷ ಗಣೇಶ ಹಬ್ಬವನ್ನು ಸಿಬ್ಬಂದಿ ಅದ್ದೂರಿಯಾಗಿ ಆಚರಿಸುತ್ತಿದ್ದರು. ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಡಿಪೋಗಳಲ್ಲಿಯೇ ಸಿಬ್ಬಂದಿ ಮತ್ತು ಕುಟುಂಬಸ್ಥರಿಗೆ ಪ್ರಸಾದದ ವ್ಯವಸ್ಥೆ ಮಾಡುವುದು ಅನೇಕ ವರ್ಷಗಳಿಂದ ನಡೆದು ಬಂದಿದ್ದ ಸಂಪ್ರದಾಯವಾಗಿತ್ತು. ಆದರೆ, ಈ ಬಾರಿ ಈ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿರುವುದು ಸಿಬ್ಬಂದಿ ಮತ್ತು ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಗ್ನಿ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಸಂಸ್ಥೆ ಹೇಳಿದೆ. ಡೀಸೆಲ್ ಟ್ಯಾಂಕ್‌ಗಳು ಮತ್ತು ಬಸ್‌ಗಳು ಇರುವ ಸ್ಥಳಗಳಲ್ಲಿ ಅಡುಗೆ ಮಾಡುವುದು ಅಪಾಯಕಾರಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದೇಶದ ವಿರುದ್ಧ ಕಾರ್ಮಿಕ ಮುಖಂಡರು ನಿಗಮದ ಕಚೇರಿಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us