ಕೋಲಾರಮ್ಮ ಕೆರೆ ಕೋಡಿ ಹರಿಯುವ ಸೇತುವೆ ಶಿಥಿಲ, ಆತಂಕದಲ್ಲಿ ಕೋಲಾರ ನಗರ ನಿವಾಸಿಗಳು
ಸೇತುವೆ ಶಿಥಿಲಗೊಂಡಿರುವುದರಿಂದ ಜಿಲ್ಲಾಡಳಿತವು ಅದನ್ನು ರಸ್ತೆ ಮತ್ತು ವಾಹನ ಸಂಚಾರಕ್ಕೆ ನಿಷೇಧಿಸಿದೆ ಮತ್ತು ಸೇತುವೆಯ ಎರಡೂ ಬದಿ ಪೊಲೀಸ್ ಕಾವಲು ನಿಯೋಜಿಸಲಾಗಿದೆ.
ಕರ್ನಾಟಕದಲ್ಲಿ ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ ಮತ್ತು ಅದು ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ರಾಜ್ಯದ ನಾನಾ ಭಾಗಗಳು ಬಂಗಾಳ ಕೊಲ್ಲಿ ಮೇಲೆ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ವರುಣನ ಅವಕೃಪೆಗೆ ಒಳಗಾಗಿವೆ. ನಾವಿಲ್ಲಿ ನಿಮಗೆ ತೋರಿಸುತ್ತಿರುವುದು ಕೋಲಾರ ನಗರದ ಚಿತ್ರಣ. ಇಲ್ಲಿನ ಕೋಲಾರಮ್ಮನ ಕೆರೆಯ ಕೋಡಿ ಹರಿಯುವ ಸೇತುವೆ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿರುವುದನ್ನು ಜಿಲ್ಲೆಯ ಟಿವಿ9 ವರದಿಗಾರ ರಾಜೇಂದ್ರ ಸಿಂಹ ವರದಿ ಮಾಡಿದ್ದಾರೆ. ವಿಡಿಯೋನಲ್ಲಿ ನೀವು ನೋಡುತ್ತಿರುವ ಹಾಗೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೋಲಾರಮ್ಮ ಕೆರೆ ಅಪಾಯದ ಮಟ್ಟಕ್ಕಿಂತ ಜಾಸ್ತಿ ತುಂಬಿ ಹರಿಯುತ್ತಿದೆ. ಸೇತುವೆ ಮೂಲಕ ಹರಿಯುತ್ತಿರುವ ನೀರಿನ ರಭಸ ನೋಡಿ. ಈ ರಭಸಕ್ಕೆ ಹೊಸದಾಗಿ ನಿರ್ಮಿಸಿದ ಸೇತುವೆಯೇ ಅಲ್ಲಾಡುವಂತಿದೆ, ಇನ್ನು ಓಬೀರಾಯನ ಕಾಲದ ಸೇತುವೇ ತಾಳೀತೇ?
ಸೇತುವೆ ಶಿಥಿಲಗೊಂಡಿರುವುದರಿಂದ ಜಿಲ್ಲಾಡಳಿತವು ಅದನ್ನು ರಸ್ತೆ ಮತ್ತು ವಾಹನ ಸಂಚಾರಕ್ಕೆ ನಿಷೇಧಿಸಿದೆ ಮತ್ತು ಸೇತುವೆಯ ಎರಡೂ ಬದಿ ಪೊಲೀಸ್ ಕಾವಲು ನಿಯೋಜಿಸಲಾಗಿದೆ. ಸೇತುವೆ ಬಲಭಾಗದಲ್ಲಿ ಗಾಂಧಿನಗರ ಹೆಸರಿನ ಕಾಲೊನಿ ಇದೆ. ಸೇತುವೆ ಏನಾದರೂ ಒಡೆದರೆ ಕೆರೆಯ ನೀರು ಇಲ್ಲಿರುವ ಮನೆಗಳಿಗೆ ನುಗ್ಗುತ್ತದೆ. ಕಾಲೊನಿಯ ಜನ ಆತಂಕದಲ್ಲಿದ್ದಾರೆ, ಭಯಗ್ರಸ್ತರಾಗಿದ್ದಾರೆ. ನಮ್ಮ ವರದಿಗಾರರು ಹೇಳುವ ಪ್ರಕಾರ ಜಿಲ್ಲಾಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಅಸಲಿಗೆ ಇದು ಮೊದಲು ಚೆನೈ ರಸ್ತೆಯಾಗಿತ್ತು ಹಾಗಾಗೇ ಇದನ್ನು ಓಲ್ಡ್ ಮದ್ರಾಸ್ ರೋಡ್ ಅನ್ನುತ್ತಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ಸಮ ಸುರಿಯುತ್ತಿರುವ ಮಳೆಯಿಂದ ಸಂಭವಿಸಿರುವ ಅನಾಹುತ, ಅವಾಂತರ ಮತ್ತು ಸೃಷ್ಟಿಯಾಗಿರುವ ಆತಂಕಗಳಲ್ಲಿ ಇದೂ ಒಂದು.
ಇದನ್ನೂ ಓದಿ: ಮೈಸೂರಿನಲ್ಲಿ ಮಳೆ ಅವಾಂತರಕ್ಕೆ ರೊಚ್ಚಿಗೆದ್ದ ಜನರು; ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ತೀವ್ರ ಆಕ್ರೋಶ