ಥ್ರಿಲ್ಲರ್ ಸೂಪರ್ ಥ್ರಿಲ್ಲರ್… ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
Perth Scorchers vs Melbourne Renegades: ಆರೋನ್ ಹಾರ್ಡಿ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲಿ ಒಲಿವರ್ ಪೀಕ್ 2 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ಒಂದು ರನ್ ಓಡಿದರು. 3ನೇ ಎಸೆತದಲ್ಲಿ ಸ್ಯಾಮ್ ಎಲಿಯೆಟ್ ಒಂದು ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ಒಲಿವರ್ ಪೀಕ್ 2 ರನ್ ಗಳಿಸಿದರು. ಆದರೆ ಐದನೇ ಎಸೆತವು ಡಾಟ್ ಆಯಿತು.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ 26ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಪರ್ತ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಹಾಗೂ ಪರ್ತ್ ಸ್ಕಾಚರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವು 19.2 ಓವರ್ಗಳಲ್ಲಿ 127 ರನ್ಗಳಿಸಿ ಆಲೌಟ್ ಆಯಿತು.
128 ರನ್ಗಳ ಸುಲಭ ಗುರಿ ಬೆನ್ನತ್ತಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 72 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ 19 ವರ್ಷದ ಯುವ ದಾಂಡಿಗ ಒಲಿವರ್ ಪೀಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಪರಿಣಾಮ 18 ಓವರ್ಗಳಾಗುಷ್ಟರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಸ್ಕೋರ್ 110 ರನ್ಗಳ ಗಡಿದಾಟಿತು. ಇದಾಗ್ಯೂ ಕೊನೆಯ ಎರಡು ಓವರ್ಗಳಲ್ಲಿ 21 ರನ್ಗಳ ಅವಶ್ಯಕತೆಯಿತ್ತು.
19ನೇ ಓವರ್ನಲ್ಲಿ ಮೆಲ್ಬೋರ್ನ್ ಬ್ಯಾಟರ್ಗಳು 11 ರನ್ ಕಲೆಹಾಕಿದರು. ಅದರಂತೆ ಅಂತಿಮ ಓವರ್ನಲ್ಲಿ 10 ರನ್ಗಳು ಬೇಕಿದ್ದರು. ಆರೋನ್ ಹಾರ್ಡಿ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲಿ ಒಲಿವರ್ ಪೀಕ್ 2 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ಒಂದು ರನ್ ಓಡಿದರು. 3ನೇ ಎಸೆತದಲ್ಲಿ ಸ್ಯಾಮ್ ಎಲಿಯೆಟ್ ಒಂದು ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ಒಲಿವರ್ ಪೀಕ್ 2 ರನ್ ಗಳಿಸಿದರು. ಆದರೆ ಐದನೇ ಎಸೆತವು ಡಾಟ್ ಆಯಿತು.
ಅಂತಿಮ ಎಸೆತದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ 4 ರನ್ಗಳು ಬೇಕಿತ್ತು. ಈ ವೇಳೆ ಸಿಕ್ಸ್ ಸಿಡಿಸುವ ಮೂಲಕ ಒಲಿವರ್ ಪೀಕ್ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ 4 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಇನ್ನು ಈ ಪಂದ್ಯದಲ್ಲಿ 30 ಎಸೆತಗಳಲ್ಲಿ ಅಜೇಯ 42 ರನ್ ಬಾರಿಸಿದ ಪೀಕ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

