Video: ಆ ಕಡೆ ಸೂರ್ಯನ ಪ್ರಕೋಪ -ಈ ಕಡೆ ಅಧಿಕಾರಿಗಳ ಬೇಜವಾಬ್ದಾರಿತನ: ಆತಂಕದ ಕ್ಷಣಗಳ ಎದುರಿಸಿದ ಸಚಿವ ಡಾಕ್ಟರ್ ಮಹದೇವಪ್ಪ
Dr HC Mahadevappa: ಆ ಮೂರು ನಿಮಿಷಗಳಲ್ಲಿ ಸಚಿವ ಮಹದೇವಪ್ಪ ಅವರ ದೇಹಸ್ಥಿತಿ ಆತಂಕ ಮೂಡಿಸಿದ್ದರೆ, ಇತ್ತ ಅವರ ಸುತ್ತ ನೆರೆದಿದ್ದ ಹಿರಿಯ ಅಧಿಕಾರಿಗಳು, ಆಪ್ತ ಪಡೆ ಮಾತ್ರ ಪರಮ ನಿರ್ಲಕ್ಷ್ಯ ತೋರಿದರು. ಅಸಲಿಗೆ ಸಚಿವರಿಗೆ ಆರೋಗ್ಯ ಹೆಚ್ಚುಕಮ್ಮಿಯಾಗಿದ್ದರ ನಾಡಿಮಿಡಿತವೇ ಅವರ ಅರಿವಿಗೆ ಬರಲಿಲ್ಲ. ಎಲ್ಲವೂ ಸರ್ಕಾರಿ ಕೆಲಸದಂತೆ ಅವರ ಆರೈಕೆಯೂ ನಿಧಾನಗತಿಯಲ್ಲಿ ನಡೆಯಿತು. ಅಸಲಿಗೆ ತಕ್ಷಣಕ್ಕೆ ಡಯಾಸ್ ಮೇಲೆ ನೀರಿನ ಬಾಟಲ್ ಇರಲಿಲ್ಲ. ನಿಂತೇ ಡಯಾಸ್ಗೆ ಒರಗಿಕೊಂಡಿದ್ದ ಡಾಕ್ಟರ್ ಮಹದೇವಪ್ಪ ಅವರು ಒಮ್ಮೆಯಂತೂ ಜೋಲಿ ತಪ್ಪಿದರು.
ದೇಶದ ಎಲ್ಲೆಡೆ ನಡೆದಂತೆ ಮೈಸೂರಿನಲ್ಲಿಯೂ 77ನೇ ಸ್ವಾತಂತ್ರ್ಯೋತ್ಸವ (independence day) ಜೋರಾಗಿಯೇ ನಡೆದಿತ್ತು. ಆದರೆ ಕೊಂಚ ಹೆಚ್ಚೇ ಬಿಸಿಲಿನ ಝಳ ಇತ್ತು. ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿತ್ತು. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ (Dr HC Mahadevappa) ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸುದೀರ್ಘವಾದ ಭಾಷಣ ಮಾಡತೊಡಗಿದರು. ಆದರೆ ಸರಿಯಾಗಿ ಅದೇ ವೇಳೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಆತಂಕದ ಕ್ಷಣಗಳನ್ನು (health) ಎದುರಿಸಿದರು. ಸುದೀರ್ಘ ಭಾಷಣ ಮಾಡತೊಡಗಿದ್ದ ಸಚಿವ ಮಹದೇವಪ್ಪ ಅವರು ತೀರಾ ಬಳಲಿ, ಸುಸ್ತಾಗಿ ಬಿಟ್ಟರು. ಬೆವರೊಡೆದು, ಬಸವಳಿದರು. ಡಯಾಸ್ಗೆ ಮುಂದಕ್ಕೆ ಒರಗಿ ಸಾವರಿಸಿಕೊಂಡರು. ಸುಮಾರು ಮೂರು ನಿಮಿಷ ಕಾಲ ಅಲ್ಲಿ ಆತಂಕ ಮನೆ ಮಾಡಿತ್ತು.
ಆ ಮೂರು ನಿಮಿಷಗಳಲ್ಲಿ ಸಚಿವ ಮಹದೇವಪ್ಪ ಅವರ ದೇಹಸ್ಥಿತಿ ಆತಂಕ ಮೂಡಿಸಿದ್ದರೆ, ಇತ್ತ ಅವರ ಸುತ್ತ ನೆರೆದಿದ್ದ ಹಿರಿಯ ಅಧಿಕಾರಿಗಳು, ಆಪ್ತ ಪಡೆ ಮಾತ್ರ ಪರಮ ನಿರ್ಲಕ್ಷ್ಯ ತೋರಿದರು. ಅಸಲಿಗೆ ಸಚಿವರಿಗೆ ಆರೋಗ್ಯ ಹೆಚ್ಚುಕಮ್ಮಿಯಾಗಿದ್ದರ ನಾಡಿಮಿಡಿತವೇ ಅವರ ಅರಿವಿಗೆ ಬರಲಿಲ್ಲ. ಸರ್ಕಾರಿ ಕೆಲಸದಂತೆ ಅವರ ಆರೈಕೆಯೂ ನಿಧಾನಗತಿಯಲ್ಲಿ ನಡೆಯಿತು. ಅಸಲಿಗೆ ತಕ್ಷಣಕ್ಕೆ ಡಯಾಸ್ ಮೇಲೆ ನೀರಿನ ಬಾಟಲ್ ಇರಲಿಲ್ಲ. ಹತ್ರಪತ್ರನೂ ಯಾರ ಬಳಿಯೂ ಜೀವಾಮೃತ ನೀರು ಇರಲಿಲ್ಲ. ನಿಂತೇ ಡಯಾಸ್ಗೆ ಒರಗಿಕೊಂಡಿದ್ದ ಡಾಕ್ಟರ್ ಮಹದೇವಪ್ಪ ಅವರು ಒಮ್ಮೆಯಂತೂ ಜೋಲಿ ತಪ್ಪಿದರು. ಕಾರ್ಯಕ್ರಮ ಮುಂದುವರಿದು, ನಡುಗುವ ಕೈಗಳಲ್ಲೇ ಚಪ್ಪಾಳೆ ತಟ್ಟುವ ಪ್ರಯಾಸವನ್ನೂ ಮಾಡಿದರು. ಸರಿಯಾಗಿ ಆಗಲೇ ಅವರು ಜೋಲಿ ತಪ್ಪಿದ್ದು. ಇಷ್ಟಾದರೂ ಅವರಿಗೆ ಕುಡಿಯಲು ನೀರು ಸಿಗುವುದಿಲ್ಲ. ಸರಿಯಾಗಿ 3 ನಿಮಿಷದ ನಂತರ ವಾಟರ್ ಬಾಟಲ್ ಸರಬರಾಜು ಆಯಿತು.
ಇದಕ್ಕಿಂತ ಆತಂಕದ, ನಿರ್ಲಕ್ಷ್ಯದ ಪರಮಾವಧಿ ಅಂದರೆ ಅವರಿಗೆ ಹಿಂದೆಯೇ ಇದ್ದ ಚೇರ್ ಕೊಟ್ಟು ಅವರನ್ನು ಕುಳ್ಳರಿಸುವ ಪ್ರಯತ್ನವನ್ನು ಯಾವೊಬ್ಬ ಅಧಿಕಾರಿಯೂ ಮಾಡದಿರುವುದು. ಕೊನೆಗೆ ಆಪ್ತ ರಕ್ಷಕ ಅದೆಲ್ಲಿಂದಲೋ ಕಾವೇರಿ ನೀರು ತಂದುಕೊಟ್ಟರೆ, ಪಕ್ಕದಲ್ಲೇ ಇದ್ದ ಆಪ್ತ ಸಹಾಯಕ ಮಾತ್ರೆ ಕೊಡುತ್ತಾರೆ. ಆ ಮಾತ್ರೆ ಸೇವಿಸಿದ ಡಾಕ್ಟರ್ ಮಹದೇವಪ್ಪ ಅವರು ಸುಧಾರಿಸಿಕೊಂಡು ಆ ಕಡೆ ಈ ಕಡೆ ನೋಡುತ್ತಾರೆ. ಆಗಷ್ಟೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡವರಂತೆ ಸುತ್ತಲೂ ರಕ್ಷಣಾ ಕೋಟೆಯಂತೆ ನಿಂತಿದ್ದ ಅಧಿಕಾರಿಗಳು ಅವರನ್ನು ಚೇರ್ ಮೇಲೆ ಕೂಡಿಸುತ್ತಾರೆ. ಅಲ್ಲಿಗೆ ಎಲ್ಲವೂ ಸುಖಾಂತ್ಯ ಆಗುತ್ತದೆ. ಸ್ವತಃ ವೈದ್ಯರಾದ ಎಚ್ ಸಿ ಮಹದೇವಪ್ಪ ಅವರು ಮುಂದೆ, ತಮ್ಮ ಆರೋಗ್ಯದ ಕಡೆ ಹೆಚ್ಚು ಜಾಗ್ರತೆ ವಹಿಸುವುದು ಒಳಿತು.
ಆಪ್ತ ಸಹಾಯಕ ಗೋಪಾಲ್‌ನಿಂದ ತಪ್ಪಿದ ಅನಾಹುತ:
ತುಸು ಸಮಾಧಾನದ ಸಂಗತಿಯೆಂದರೆ ಸಚಿವ ಮಹದೇವಪ್ಪ ಅವರ ಸುದೀರ್ಘ ಭಾಷಣವನ್ನು ಮೊಟುಕುಗೊಳಿಸಿ, ಕೊನೆಯ ಪೇಜ್‌ಗೆ ತಿರುಗಿಸಿದ್ದು ಆಪ್ತ ಸಹಾಯಕ ಗೋಪಾಲ್. ಭಾಷಣ ದೀರ್ಘವಾಗಿ ಎಳೆಯುತ್ತಿದ್ದಂತೆ ಡಾ ಮಹದೇವಪ್ಪ ಬಾಯಿ ತಡವರಿಸಲು ಶುರುವಾಗಿತ್ತು. ಕಷ್ಟಪಟ್ಟು ಭಾಷಣ ಓದುತ್ತಿದ್ದರು. ಅವರ ಹಿಂದೆಯೇ ಇದ್ದ ಅವರ ಆಪ್ತ ಸಹಾಯಕ ಗೋಪಾಲ್ ಸಮಯಪ್ರಜ್ಞೆಯಿಂದ ವರ್ತಿಸಿ, ಆಗಬಹುದಾದ ಅನಾಹುತವನ್ನು ತಪ್ಪಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ