Loading video

ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಆರಂಭಕ್ಕೆ ವಿರೋಧ: ದುಸ್ಥಿತಿ ಕಂಡು ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು

| Updated By: ವಿವೇಕ ಬಿರಾದಾರ

Updated on: Feb 24, 2025 | 2:35 PM

ಕೊಪ್ಪಳದಲ್ಲಿ ಬಲ್ಡೋಟಾ ಉಕ್ಕು ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ. ಫೆಬ್ರವರಿ 24ರಂದು ನಡೆದ ಬಂದ್‌ನಲ್ಲಿ, ಗವಿಮಠದ ಸ್ವಾಮೀಜಿಗಳು ಕಣ್ಣೀರು ಹಾಕಿ, ಈಗಾಗಲೇ ಇರುವ ಕಾರ್ಖಾನೆಗಳಿಂದ ಆಗಿರುವ ಪರಿಸರ ಹಾನಿ ಮತ್ತು ಜನರ ಆರೋಗ್ಯದ ಮೇಲಿನ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅವರು ಕೊಪ್ಪಳದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಕೊಪ್ಪಳ, ಫೆಬ್ರವರಿ 24: ಕೊಪ್ಪಳ (Koppal) ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ಸ್ಟೀಲ್ ಕಾರ್ಖಾನೆ  ಸ್ಥಾಪನೆಗೆ ವಿರೋಧಿಸಿ ಸೋಮವಾರ (ಫೆ.24) ಕೊಪ್ಪಳ ಬಂದ್ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಸಭೆಯಲ್ಲಿ ಕೊಪ್ಪಳದ ಸುಪ್ರಸಿದ್ಧ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ (Abhinava Gavisiddeshwara Swamiji) ಕಣ್ಣೀರು ಹಾಕಿದ ಘಟನೆ ನಡೆಯಿತು.

ಸಭೆಯಲ್ಲಿ ಈಗಾಗಲೇ ಇರೋ ಅನೇಕ ಸ್ಟೀಲ್ ಪ್ಯಾಕ್ಟರಿಗಳಿಂದ ಸುತ್ತಮುತ್ತಲಿನ ಜನರ ಮೇಲೆ ಆಗುತ್ತಿರುವ ದುಷ್ಪರಿಣಾಮ ಬಗ್ಗೆ ವಿಡಿಯೋ ಪ್ರದರ್ಶನ ಮಾಡಲಾಯಿತು. ದೂಳು ಮತ್ತು ಹೊಗೆಯಿಂದ ಜನರು ಸಂಕಷ್ಟ ಪಡುತ್ತಿರುವ ದೃಶ್ಯಗಳನ್ನು ನೋಡುತ್ತಲೇ ಗವಿಮಠದ ಸ್ವಾಮೀಜಿ ಭಾವುಕರಾಗಿ ಕಣ್ಣೀರು ಹಾಕಿದರು.

ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಕೊಪ್ಪಳ ಸಾಂಸ್ಕೃತಿಕ ರಾಜಧಾನಿಯಾಗಿದೆ. ಆದರೆ, ಇದೀಗ ಕರಿ ಅರಳಿಯಂತಾಗಿದೆ. ಬಲ್ಡೋಟಾ ಸೇರಿದಂತೆ ಕೊಪ್ಪಳದಲ್ಲಿ ಯಾವುದೇ ಕಾರ್ಖಾನೆ ಆರಂಭಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು.

ದೇಶದ ಪ್ರಗತಿಗೆ ಕಾರ್ಖಾನೆಗಳು ಬೇಕು. ಆದರೆ, ಯಾವ ಭಾಗದಲ್ಲಿ ಎಷ್ಟು ಮುಖ್ಯ ಅಂತ ನೋಡಬೇಕು. ಕೊಪ್ಪಳ ತಾಲೂಕಿನಲ್ಲಿ 202 ಕಾರ್ಖಾನೆಗಳಿವೆ. ಬರೀ ಕಾರ್ಖಾನೆಗಳೇ ಇದ್ದರೇ ಜನ ಇರುವುದಾರು ಎಲ್ಲಿ? ಇದೇ ರೀತಿ ಕಾರ್ಖಾನೆ ಆರಂಭವಾದರೆ ಕೊಪ್ಪಳ ನರಕವಾಗುತ್ತದೆ. ತೊಟ್ಟಿಲಲ್ಲಿ ಹೋಗುವವರು ಕಡಿಮೆಯಾಗುತ್ತಾರೆ. ನರಕಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಸದ್ಯ ಕೊಪ್ಪಳ ತಿಪ್ಪೆ ಆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುತ್ತಮುತ್ತಲಿನ ಜನರ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಸಣ್ಣ ಮಕ್ಕಳಿಗೆ ಕ್ಯಾನ್ಸರ್, ಅಸ್ತಮಾ ಬರುತ್ತಿದೆ. ಇರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ನೀಡಬಾರದು. ಹೊಗೆ ಉಗಳುವ ಕಾರ್ಖಾನೆಗಳನ್ನು ನಮಗೆ ಕಳಿಸುವ ಕೆಲಸ ಸರ್ಕಾರ ಮಾಡಬಾರದು. ಸರ್ಕಾರ ಬಂಡವಾಳ ಶಾಹಿಗಳ ಪರವಾಗಿರಬಾರದು. ಸರ್ಕಾರ ಬಡವರ ಪರ ಇರಬೇಕು. ಸರ್ಕಾರ ಕೊಪ್ಪಳ ಜನರನ್ನು ಜೋಪಾನ ಮಾಡಬೇಕಿದೆ. ಸರ್ಕಾರ ತಾಯಿಯಿದ್ದಂತೆ, ವಿಷ‌ ಹಾಕುತ್ತೀರೋ ಅಥವಾ ಅಮೃತ ಹಾಕುತ್ತಿರೋ ನಿಮಗೆ ಬಿಟ್ಟಿದ್ದು. ಕೊಪ್ಪಳ ಜನರಿಗೆ ಬದುಕಲು ಅವಕಾಶ ನೀಡಿ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 24, 2025 02:33 PM