ವಿಧಾನಪರಿಷತ್‌ನಲ್ಲಿ ಗೂಂಡಾವರ್ತನೆ: ಸಭಾಪತಿ ಕುರ್ಚಿ ಎದುರೇ ಕೈಕೈ ಮಿಲಾಯಿಸಲು ಮುಂದಾದ ಸದಸ್ಯರು

ವಿಧಾನಪರಿಷತ್‌ನಲ್ಲಿ ಗೂಂಡಾವರ್ತನೆ: ಸಭಾಪತಿ ಕುರ್ಚಿ ಎದುರೇ ಕೈಕೈ ಮಿಲಾಯಿಸಲು ಮುಂದಾದ ಸದಸ್ಯರು

ವಿವೇಕ ಬಿರಾದಾರ
|

Updated on:Feb 28, 2024 | 12:54 PM

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‌ನಲ್ಲಿ ಗದ್ದಲ, ಕೋಲಾಹಲ ಏರ್ಪಟ್ಟಿದೆ. ಈ ಬಗ್ಗೆ ಬಿಜೆಪಿ ಸದಸ್ಯ ಎನ್​​. ರವಿಕುಮಾರ್‌ ಮಾತನಾಡುವಾಗ ಕಾಂಗ್ರೆಸ್​ ಸದಸ್ಯ ಅಬ್ದುಲ್ ಜಬ್ಬಾರ್ ರವಿಕುಮಾರ್​ ಅವರ ವಿರುದ್ಧ ಏಕವಚನ ಪ್ರಯೋಗ ಮಾಡಿದರು. ಇದರಿಂದ ರೊಚ್ಚಿಗೆದ್ದ ಎನ್​.ರವಿಕುಮಾರ್ ಮುಂದೇನು ಮಾಡಿದರು? ವಿಡಿಯೋ ನೋಡಿ..

ಬೆಂಗಳೂರು, ಫೆಬ್ರವರಿ 28: ಮಂಗಳವಾರ (ಫೆ.27) ರಂದು ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ವಿಜಯಶಾಲಿಯಾದರು. ಕಾಂಗ್ರೆಸ್​ ಅಭ್ಯರ್ಥಿ ಸಯ್ಯದ ನಾಸೀರ್​ ಹುಸೇನ್​ ಅವರ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲೇ ಇವರ ಬೆಂಬಲಿಗನೋರ್ವ ಪಾಕಿಸ್ತಾನ ಜಿಂದಾಬಾದ್​ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಪ್ರಸ್ತಾಪವಾಗಿದೆ. ವಿಧಾನ ಪರಿಷತ್​​ನಲ್ಲಿ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದರು. ಪಾಕಿಸ್ತಾನ ಪರ ಘೋಷಣೆ ಹಾಕಿರುವ ವಿಚಾರವನ್ನು ಪರಿಷತ್​ ಸದಸ್ಯ ಎನ್​ ರವಿಕುಮಾರ್​​ ಪ್ರಸ್ತಾಪಿಸಿದರು. ರವಿಕುಮಾರ್ ಮಾತಿನ ಬರದಲ್ಲಿ “ದೇಶದ್ರೋಹಿ ಸರ್ಕಾರ” ಎಂದರು.

ಈ ವಿಚಾರವಾಗಿ ಗದ್ದಲ ಶುರುವಾಗಿದೆ ಆ ವೇಳೆ ಪರಿಷತ್​​​ ಸದಸ್ಯ ಅಬ್ದುಲ್ ಜಬ್ಬಾರ್ “ಅವನ ಬಾಯಿ ಬಂದ್ ಮಾಡಿ” ಎಂದು ರವಿಕುಮಾರ್​ ಅವರ ಮೇಲೆ ಏಕವಚನ ಪ್ರಯೋಗ ಮಾಡಿದರು. ಇದರಿಂದ ವಿಧಾನಪರಿಷತ್‌ನಲ್ಲಿ ಗದ್ದಲ ಜೋರಾಯಿತು. ಅಬ್ದುಲ್ ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತಾಡಿದರೆ ಸರಿ ಇರಲ್ಲವೆಂದರು. ಬಳಿಕ ರವಿಕುಮಾರ್ ಎದ್ದು ಅಬ್ದುಲ್​ ಜಬ್ಬರ್​ ಬಳಿ ಹೋದರು. ರವಿಕುಮಾರ್ ಜೊತೆ ತುಳಸಿ ಮುನಿರಾಜುಗೌಡ ಮುನ್ನುಗ್ಗಿ ಹೋದರು. ಎರಡೂ ಕಡೆಯ ಸದಸ್ಯರು ಸಭಾಪತಿಗಳ ಕುರ್ಚಿ ಮುಂದೆ ಜಮಾಯಿಸಿ, ಕೈಕೈ ಮಿಲಾಯಿಸಲು ಮುಂದಾದರು.

ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮಾರ್ಷಲ್‌ಗಳು ಹರಸಾಹಸಪಟ್ಟರು. ಮಧ್ಯ ಪ್ರವೇಶಿಸಿದ ಸಚಿವ ಹೆಚ್‌.ಕೆ.ಪಾಟೀಲ್‌ ಎರಡೂ ಕಡೆಯವರನ್ನು ಸಮಾಧನಪಡಿಸಿದರು. ಮತ್ತು ಕ್ಷಮೆ ಕೇಳುವಂತೆ ಸಲಹೆ ನೀಡರು. ಇದಕ್ಕೆ ಎನ್​. ರವಿಕುಮಾರ್​ ದೇಶದ ಪರವಾಗಿ ಮಾತನಾಡಿದ್ದೇನೆ, ಅದು ಕ್ಷಮೆ ಕೇಳುವ ವಿಷಯವಾ? ಎಂದರು. ಇತ್ತ ಅಬ್ದುಲ್ ಜಬ್ಬಾರ್ ನಿಮ್ಮ ಮೂಲಕ ನಾನು ಆಡಿದ ಮಾತು ವಾಪಸ್ ಪಡೆಯುತ್ತೇನೆ ಎಂದು ಹೇಳಿದರು.

 

Published on: Feb 28, 2024 12:51 PM