ವಿಧಾನಪರಿಷತ್‌ನಲ್ಲಿ ಗೂಂಡಾವರ್ತನೆ: ಸಭಾಪತಿ ಕುರ್ಚಿ ಎದುರೇ ಕೈಕೈ ಮಿಲಾಯಿಸಲು ಮುಂದಾದ ಸದಸ್ಯರು
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‌ನಲ್ಲಿ ಗದ್ದಲ, ಕೋಲಾಹಲ ಏರ್ಪಟ್ಟಿದೆ. ಈ ಬಗ್ಗೆ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಮಾತನಾಡುವಾಗ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ರವಿಕುಮಾರ್ ಅವರ ವಿರುದ್ಧ ಏಕವಚನ ಪ್ರಯೋಗ ಮಾಡಿದರು. ಇದರಿಂದ ರೊಚ್ಚಿಗೆದ್ದ ಎನ್.ರವಿಕುಮಾರ್ ಮುಂದೇನು ಮಾಡಿದರು? ವಿಡಿಯೋ ನೋಡಿ..
ಬೆಂಗಳೂರು, ಫೆಬ್ರವರಿ 28: ಮಂಗಳವಾರ (ಫೆ.27) ರಂದು ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ವಿಜಯಶಾಲಿಯಾದರು. ಕಾಂಗ್ರೆಸ್ ಅಭ್ಯರ್ಥಿ ಸಯ್ಯದ ನಾಸೀರ್ ಹುಸೇನ್ ಅವರ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲೇ ಇವರ ಬೆಂಬಲಿಗನೋರ್ವ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಪ್ರಸ್ತಾಪವಾಗಿದೆ. ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದರು. ಪಾಕಿಸ್ತಾನ ಪರ ಘೋಷಣೆ ಹಾಕಿರುವ ವಿಚಾರವನ್ನು ಪರಿಷತ್ ಸದಸ್ಯ ಎನ್ ರವಿಕುಮಾರ್ ಪ್ರಸ್ತಾಪಿಸಿದರು. ರವಿಕುಮಾರ್ ಮಾತಿನ ಬರದಲ್ಲಿ “ದೇಶದ್ರೋಹಿ ಸರ್ಕಾರ” ಎಂದರು.
ಈ ವಿಚಾರವಾಗಿ ಗದ್ದಲ ಶುರುವಾಗಿದೆ ಆ ವೇಳೆ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ “ಅವನ ಬಾಯಿ ಬಂದ್ ಮಾಡಿ” ಎಂದು ರವಿಕುಮಾರ್ ಅವರ ಮೇಲೆ ಏಕವಚನ ಪ್ರಯೋಗ ಮಾಡಿದರು. ಇದರಿಂದ ವಿಧಾನಪರಿಷತ್‌ನಲ್ಲಿ ಗದ್ದಲ ಜೋರಾಯಿತು. ಅಬ್ದುಲ್ ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತಾಡಿದರೆ ಸರಿ ಇರಲ್ಲವೆಂದರು. ಬಳಿಕ ರವಿಕುಮಾರ್ ಎದ್ದು ಅಬ್ದುಲ್ ಜಬ್ಬರ್ ಬಳಿ ಹೋದರು. ರವಿಕುಮಾರ್ ಜೊತೆ ತುಳಸಿ ಮುನಿರಾಜುಗೌಡ ಮುನ್ನುಗ್ಗಿ ಹೋದರು. ಎರಡೂ ಕಡೆಯ ಸದಸ್ಯರು ಸಭಾಪತಿಗಳ ಕುರ್ಚಿ ಮುಂದೆ ಜಮಾಯಿಸಿ, ಕೈಕೈ ಮಿಲಾಯಿಸಲು ಮುಂದಾದರು.
ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮಾರ್ಷಲ್‌ಗಳು ಹರಸಾಹಸಪಟ್ಟರು. ಮಧ್ಯ ಪ್ರವೇಶಿಸಿದ ಸಚಿವ ಹೆಚ್.ಕೆ.ಪಾಟೀಲ್ ಎರಡೂ ಕಡೆಯವರನ್ನು ಸಮಾಧನಪಡಿಸಿದರು. ಮತ್ತು ಕ್ಷಮೆ ಕೇಳುವಂತೆ ಸಲಹೆ ನೀಡರು. ಇದಕ್ಕೆ ಎನ್. ರವಿಕುಮಾರ್ ದೇಶದ ಪರವಾಗಿ ಮಾತನಾಡಿದ್ದೇನೆ, ಅದು ಕ್ಷಮೆ ಕೇಳುವ ವಿಷಯವಾ? ಎಂದರು. ಇತ್ತ ಅಬ್ದುಲ್ ಜಬ್ಬಾರ್ ನಿಮ್ಮ ಮೂಲಕ ನಾನು ಆಡಿದ ಮಾತು ವಾಪಸ್ ಪಡೆಯುತ್ತೇನೆ ಎಂದು ಹೇಳಿದರು.