ಪಾವಗಡ ಬಸ್ ದುರಂತ: ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡೆ ಎಂದರು ಶ್ರೀರಾಮುಲು
ಅಪಘಾತ ನಡೆದ ಸ್ಥಳದಲ್ಲಿ 2 ಮತ್ತು ಆಸ್ಪತ್ರೆಗಳಲ್ಲಿ ಮೂರು ಜನ ಸತ್ತಿರುವರೆಂದು ಶ್ರೀರಾಮುಲು ಹೇಳಿದರು. ಆಸ್ಪತ್ರೆ ಮತ್ತು ಮೃತರಾದವರ ಮನೆಗಳಿಗೆ ಭೇಟಿ ನೀಡಿರುವ ಸಚಿವರು ಸತ್ತವರ ಕುಟುಬಗಳಿಗೆ ತಲಾ 5 ಲಕ್ಷ ರೂ. ಸರ್ಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ನೀಡುವ ಘೋಷಣೆ ಮಾಡಿದ್ದಾರೆ.
ಶನಿವಾರ ಪಾವಗಡ ಬಳಿ ನಡೆದ ಘೋರ ಬಸ್ ಅಪಘಾತ ಕುರಿತು ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರು ಸೋಮವಾರ ಸದನದಲ್ಲಿ ವಿವರಣೆ ನೀಡಿದರು. ಅಪಘಾತ ನಡೆದ ಸಂದರ್ಭದಲ್ಲಿ ಕಲಬುರಗಿಗೆ ಪ್ರವಾಸ ಹೊರಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಕಂದಾಯ ಸಚಿವ ಆರ್ ಅಶೋಕ (R Ashoka) ಟೆಕ್ನಕಲ್ (technical halt) ನಿಲುಗಡೆಗಾಗಿ ಹೊಸಪೇಟೆ ಬಳಿಯ ಜಿಂದಾಲ್ ನಗರದಲ್ಲಿ ವಿಶ್ರಮಿಸಿಕೊಳ್ಳ್ಳುತ್ತಿದ್ದಾಗ ಸಚಿವ ಶ್ರೀರಾಮುಲು ಅವರೊಂದಿಗಿದ್ದರಂತೆ. ಅಸಲಿಗೆ ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿಗಳಿಂದಲೇ ವಿಷಯ ಗೊತ್ತಾಗಿದೆ. ಅವರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಮತ್ತು ಸಂಬಂಧಪಟ್ಟ ಎಲ್ಲ ಸಾರಿಗೆ ಅಧಿಕಾರಿಗಳನ್ನು ಅಲ್ಲಿಗೆ ಕರೆಸಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆಯೆಂದು ಅವರ ಸದನಕ್ಕೆ ತಿಳಿಸಿದರು. ಅಧಿಕಾರಿಗಳ ಮೂಲಕ ಪ್ರಾಥಮಿಕ ವರದಿ ತರಿಸಿಕೊಂಡ ನಂತರ, ಈ ಅಪಘಾತ ಸಂಭವಿಸುವ ಕೇವಲ ಎರಡು ದಿನ ಮೊದಲು ಮತ್ತೊಂದು ಖಾಸಗಿ ಬಸ್ ಅಪಘಾತಕ್ಕೀಡಾಗಿತ್ತಂತೆ. ಹಾಗಾಗಿ 2-3 ಖಾಸಗಿ ಬಸ್ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಕಾರಣ ಪಾವಗಡದಲ್ಲಿ ಉರುಳಿಬಿದ್ದ ಬಸ್ ಓವರಲೋಡ್ ಆಗಿತ್ತು ಎಂದು ಸಚಿವರು ಹೇಳಿದರು.
ದುರಂತವುಂಟಾದ ಪಳವಳ್ಳಿ ಕೆರೆ ಏರಿಯ ಮೇಲಿನ ರಸ್ತೆ ಬ್ಲ್ಯಾಕ್ ಸ್ಪಾಟ್ ಗಳೆಂದು ಪರಿಗಣಿಸಲ್ಪಟ್ಟಿರುವ ಸ್ಥಳಗಳಲ್ಲಿ ಒಂದಾಗಿದೆ ಎಂದು ಶ್ರೀರಾಮುಲು ಸದನಕ್ಕೆ ತಿಳಿಸಿದರು. ಬ್ಲ್ಯಾಕ್ ಸ್ಪಾಟ್ ಗಳನ್ನು ರಕ್ಷೆ ಸುರಕ್ಷತೆ ಯೋಜನೆ ಅಡಿಯಲ್ಲಿ ಕೇಂದ್ರದ ಅನುದಾನದೊಂದಿಗೆ ಸರಿಪಡಿಸುವ ಕೆಲಸಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದರು.
ಅಪಘಾತ ನಡೆದ ಸ್ಥಳದಲ್ಲಿ 2 ಮತ್ತು ಆಸ್ಪತ್ರೆಗಳಲ್ಲಿ ಮೂರು ಜನ ಸತ್ತಿರುವರೆಂದು ಶ್ರೀರಾಮುಲು ಹೇಳಿದರು. ಆಸ್ಪತ್ರೆ ಮತ್ತು ಮೃತರಾದವರ ಮನೆಗಳಿಗೆ ಭೇಟಿ ನೀಡಿರುವ ಸಚಿವರು ಸತ್ತವರ ಕುಟುಬಗಳಿಗೆ ತಲಾ 5 ಲಕ್ಷ ರೂ. ಸರ್ಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ನೀಡುವ ಘೋಷಣೆ ಮಾಡಿದ್ದಾರೆ. ಹಾಗೆಯೇ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ರೂ. 50,000 ಮತ್ತು ಸಣ್ಣಪುಟ್ಟ ಗಾಯ ಅನುಭವಿಸಿರುವವರಿಗೆ ತಲಾ ರೂ. 25,000 ನೀಡುವ ಘೋಷಣೆ ಮಾಡಿರುವುದಾಗಿ ಸಹ ಸಚಿವರು ಹೇಳಿದರು.
ಆ ಭಾಗದಲ್ಲಿ ಸರ್ಕಾರಿ ಬಸ್ ಗಳ ಓಡಾಟ ಬಹಳ ಕಡಿಮೆ ಹಾಗಾಗೇ, ಖಾಸಗಿ ಬಸ್ ಗಳು ಪಾರಮ್ಯ ಮೆರೆಯುತ್ತಿವೆ ಎಂದು ಜನ ಹೇಳಿದ್ದರಿಂದ 14 ಬಸ್ ಮತ್ತು 28 ಚಾಲಕರನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು. ಹಾಗೆಯೇ, ಈ ದುರಂತಕ್ಕೆ ಹೊಣೆಯಾಗಿರುವ ಐವರು ಅಧಿಕಾರಿಗನ್ನು ಸಸ್ಪೆಂಡ್ ಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಶ್ರೀರಾಮುಲು ಹೇಳಿದರು.
ಇದನ್ನೂ ಓದಿ: ಪಾವಗಡ ಬಸ್ ಅಪಘಾತ ಪ್ರಕರಣ: ಜನರಿಗೆ ಬಸ್ ಹತ್ತಬೇಡಿ ಅಂತ ಹೇಳಲಾಗಲ್ಲ ಎಂದು ಉಡಾಫೆ ಉತ್ತರ ನೀಡಿದ ಬಸ್ ನಿರ್ವಾಹಕ ಮುರುಳಿ