ವೈಪರ್, ಬಕೆಟ್, ಸ್ಪಾಂಜ್: ಪಾಕಿಸ್ತಾನದ ಅವ್ಯವಸ್ಥೆಯೇ ಟ್ರೋಲ್
Afghanistan vs Australia: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 50 ಓವರ್ಗಳಲ್ಲಿ 273 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 12.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್ ಕಲೆಹಾಕಿದೆ. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಅದರಂತೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಅಂಕದೊಂದಿಗೆ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ಗೇರಿದೆ.
ಪಾಕಿಸ್ತಾನ್ ಬರೋಬ್ಬರಿ 29 ವರ್ಷಗಳ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯವಹಿಸಿದೆ. ಹೀಗೆ ಸಿಕ್ಕ ಚಾಂಪಿಯನ್ಸ್ ಟ್ರೋಫಿ ಆತಿಥ್ಯದೊಂದಿಗೆ ಪಾಕಿಸ್ತಾನದಲ್ಲಿನ ಸ್ಟೇಡಿಯಂಗಳ ಅವ್ಯವಸ್ಥೆ ಕೂಡ ಬಹಿರಂಗವಾಗಿದೆ. ಲಾಹೋರ್ನ ಗದ್ಧಾಫಿ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆ ಮಳೆ ಬಂದಾಗ ಮೈದಾನವನ್ನು ಸಂಪೂರ್ಣವಾಗಿ ಹೊದಿಸಲು ಟರ್ಪಲ್ನ ಕೊರತೆ ಕಂಡು ಬಂದಿತ್ತು.
ಇದೀಗ 1280 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಲಾದ ಗದ್ದಾಫಿ ಸ್ಟೇಡಿಯಂನಲ್ಲಿ ಸರಿಯಾದ ಡ್ರೈನೇಜ್ ವವ್ಯಸ್ಥೆ ಕೂಡ ಇಲ್ಲ ಎಂಬುದು ಜಗಜ್ಜಾಹೀರಾಗಿದೆ. ಅದರಲ್ಲೂ ಅಫ್ಘಾನಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆ ಮೈದಾನದಲ್ಲಿನ ನೀರನ್ನು ಹೊರಹಾಕಲು ಸಿಬ್ಬಂದಿಗಳು ವೈಪರ್ಗಳನ್ನು ಬಳಿಸಿರುವುದು ಮತ್ತೊಂದು ಆಶ್ಚರ್ಯ.
ಇದರ ಜೊತೆಗೆ ಸ್ಪಾಂಜ್ಗಳನ್ನು ಬಳಸಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳಲು ಯತ್ನಿಸುತ್ತಿರುವ ದೃಶ್ಯವು ಇದೀಗ ನಗೆಪಾಟಲಿಗೀಡಾಗಿದೆ. ಗದ್ದಾಫಿ ಸ್ಟೇಡಿಯಂ ಸಿಬ್ಬಂದಿಗಳು ಮೈದಾನದಲ್ಲಿನ ನೀರನ್ನು ಒಣಗಿಸಲು ಪಡುತ್ತಿರುವ ಪಾಡಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಿಂದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರೀ ಮುಜುಗರಕ್ಕೀಡಾಗಿದೆ.