ಮೂರನೇ ಅಲೆ ಶುರುವಾದರೂ ಜಾತ್ರೆ ಮತ್ತು ಉತ್ಸವಗಳಲ್ಲಿ ಸಹಸ್ರಾರು ಜನ ಸೇರುವುದು ಮುಂದುವರಿದಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 03, 2022 | 6:55 PM

ಇಂಚಲ ಗ್ರಾಮದಲ್ಲಿ ಜನ ಎರಡು ಕಾರಣಗಳಿಗೆ ಸೇರಿದ್ದಾರೆ. ಮೊದಲನೆಯದ್ದು ಡಾ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಅವರ 82 ನೇ ಜನ್ಮದಿನಾಚರಣೆ ಮತ್ತು ಅದರ ಅಂಗವಾಗಿ ಆಯೋಜಿಸಿದ ಜಾತ್ರೆ, ಎರಡನೆಯದ್ದು ಶ್ರೀಇಂಚಲ ಮಠದ ವೇದಾಂತ ಪರಿಷತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ರಥೋತ್ಸವ.

ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಒಮೈಕ್ರಾನ್ ರೂಪಾಂತರಿ ಮತ್ತು ಕೋವಿಡ್-19 ಪಿಡುಗಿನ ಮೂರನೇ ಅಲೆ ಬಗ್ಗೆ ಎಷ್ಟೇ ಎಚ್ಚರಿಸಿದರೂ ಮೊಂಡುತನ, ಬೇಜವಾಬ್ದಾರಿತನವನ್ನು ನಾವು ಬಿಡಲಾರೆವು ಮಾರಾಯ್ರೇ. ನಮ್ಮ ದೇಶದಲ್ಲಿ ಮೂರನೇ ಅಲೆ ಈಗಾಗಲೇ ಆರಂಭವಾಗಿದೆ ಮತ್ತು ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಆದರೆ, ರಾಜಕೀಯ ಸಮಾವೇಶ, ರೋಡ್​ ಶೋ, ಜಾತ್ರೆ, ಧಾರ್ಮಿಕ ಉತ್ಸವಗಳಿಗೆ ಕಡಿವಾಣ ಇಲ್ಲದಂತಾಗಿದೆ. ಎಲ್ಲ ಧಾರ್ಮಿಕ ಮುಖಂಡರು ತಮ್ಮ ಅನುಯಾಯಿಗಳನ್ನು, ಭಕ್ತರನ್ನು ಈ ಸಂದರ್ಭದಲ್ಲಿ ಗುಂಪು ಸೇರದಂತೆ ಎಚ್ಚರಿಸಬೇಕಾದ ಅವಶ್ಯಕತೆಯಿದೆ. ಅವರು ಹೇಳಿದರೆ ಜನ ಕೇಳುತ್ತಾರೆ. ಆದರೆ ಅವರು ಹೇಳುತ್ತಿಲ್ಲ. ಬೆಳಗಾವಿಯ ಸವದತ್ತಿ ತಾಲ್ಲೂಕಿನ ಇಂಚಲ ಗ್ರಾಮದಲ್ಲಿ ಜನ ಸೇರಿರುವ ಪರಿ ನೋಡಿ. ಸಾವಿರಾರು ಜನ, ಅದರಲ್ಲಿ ಬಹಳಷ್ಟು ಜನ ಮಾಸ್ಕ್ ಕೂಡ ಧರಿಸದೆ ಒಂದೆಡೆ ಸೇರಿದ್ದಾರೆ.

ಇಂಚಲ ಗ್ರಾಮದಲ್ಲಿ ಜನ ಎರಡು ಕಾರಣಗಳಿಗೆ ಸೇರಿದ್ದಾರೆ. ಮೊದಲನೆಯದ್ದು ಡಾ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಅವರ 82 ನೇ ಜನ್ಮದಿನಾಚರಣೆ ಮತ್ತು ಅದರ ಅಂಗವಾಗಿ ಆಯೋಜಿಸಿದ ಜಾತ್ರೆ, ಎರಡನೆಯದ್ದು ಶ್ರೀಇಂಚಲ ಮಠದ ವೇದಾಂತ ಪರಿಷತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ರಥೋತ್ಸವ. ಇವೆರಡು ಉತ್ಸವಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ಅನೇಕ ಭಾಗಗಳಿಂದ ಮತ್ತು ಪಕ್ಕದ ಮಹಾರಾಷ್ಟ್ರದಿಂದ ಭಕ್ತರು ಭಾಗವಹಿಸಿದ್ದಾರೆ.

ಉತ್ಸವ, ಜಾತ್ರೆಗಳು ರಥೋತ್ಸವ ನಮ್ಮ ಸಂಸ್ಕೃತಿ ಆಗಿವೆ, ಇದು ಬೇರೆ ಗ್ರಹದವರಿಗೂ ಗೊತ್ತಿರುವ ವಿಷಯ. ಆದರೆ, ನಾವೀಗ ಕೋವಿಡ್​-19 ಮೂರನೇ ಅಲೆಯ ಭೀತಿಯಲ್ಲಿ ಸಿಲುಕಿದ್ದೇವೆ. ಒಮೈಕ್ರಾನ್ ರೂಪಾಂತರಿಯ ಸೋಂಕು ಮೊದಲಿನ ಕೊರೋನಾ ಸೋಂಕುಗಳಗಿಂತ 5 ಪಟ್ಟು ವೇಗವಾಗಿ ಹಬ್ಬುತ್ತದೆ ಎಂದು ತಜ್ಞರು ಹೇಳಿದ್ದಾರೆ. ನಮ್ಮಲ್ಲಿ ಅನೇಕರು ಎರಡೆರಡು ಡೋಸ್​ ಲಸಿಕೆ ಹಾಕಿಸಿಕೊಂಡಿದ್ದೇವೆ.

ಅದರೆ, ಒಂದು ಡೋಸ್​ ಮಾತ್ರ ಮತ್ತು ಒಂದನ್ನೂ ಹಾಕಿಸಿಕೊಳ್ಳದ ಜನರು ಸಹ ಇದ್ದಾರೆ. ಮಕ್ಕಳಿಗೆ ಕೇವಲ ಇಂದಿನಿಂದ (ಜನೆವರಿ 3) ಲಸಿಕೆ ಹಾಕುವುದು ಆರಂಭವಾಗಿದೆ.

ನಮ್ಮ ಉಡಾಫೆ, ಬೇಜವಾಬ್ದಾರಿತನದಿಂದ ಮುಂದಿನ ಪೀಳಿಗೆ ಅಪಾಯಕ್ಕೆ ಈಡಾಗುತ್ತಿದೆ. ನಮ್ಮ ಧೋರಣೆ ಬದಲಾಗದಿದ್ದರೆ ಅವರು ನಮ್ಮನ್ನು ಕ್ಷಮಿಲಾರರು. ಮೂರನೇ ಅಲೆಯ ನಂತರ ವೈರಸ್​ ದುರ್ಬಲಗೊಳ್ಳಲಿದೆ ಅಂತ ತಜ್ಞರು ಹೇಳುತ್ತಿದ್ದಾರೆ. ಪರಿಸ್ಥಿತಿ ತಿಳಿಯಾಗುವವರೆಗೆ ತಾಳ್ಳೆಯಿಂದ ಕಾಯುವುದು ನಾವು ಅತ್ಯಂತ ಜರೂರಾಗಿ ಮಾಡಬೇಕಾದ ಕೆಲಸವಾಗಿದೆ.

ಸರ್ಕಾರವಾಗಲೀ, ಪೊಲೀಸರಾಗಲೀ ಜಾತ್ರೆಗಳಿಂದ ನಮ್ಮನ್ನು ವಾಪಸ್ಸು ಕರೆದೊಯ್ದು ಮನೆಗೆ ಬಿಡುವುದಿಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಗುಂಪು ಸೇರದಿರುವುದರಲ್ಲಿ ವಿವೇಕ ಅಡಗಿದೆ.

ಇದನ್ನೂ ಓದಿ:   ಹೊಸ ವರ್ಷದಂದು ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಅಭಿಮಾನಿಗಳೊಂದಿಗೆ ಆಗಮಿಸಿದ ಅಪ್ಪು; ವಿಡಿಯೋ ಇಲ್ಲಿದೆ

Published on: Jan 03, 2022 06:54 PM