ಪೆಟ್ರೋಲ್ ಡೀಸೆಲ್ ಬೆಲೆ ಇನ್ನೂ ಏರಿಕೆಯಾಗುತ್ತಾ? ಇಂಧನ ದರದಲ್ಲಿ ಕೇಂದ್ರ, ರಾಜ್ಯಕ್ಕೆಷ್ಟು ಪಾಲು ಎಂಬ ಮಾಹಿತಿ ಇಲ್ಲಿದೆ

Updated on: May 25, 2026 | 1:48 PM

ಕೇವಲ 11 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ನಾಲ್ಕನೇ ಬಾರಿಗೆ ಏರಿಕೆಯಾಗಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ತೆರಿಗೆ ಪಾಲು ಈ ಹೆಚ್ಚಳಕ್ಕೆ ಪ್ರಮುಖ ಕಾರಣ. ತೆರಿಗೆ ಕಡಿತಗೊಳಿಸುವುದು ತಕ್ಷಣದ ಪರಿಹಾರವಾಗಿದ್ದು, ಇಲ್ಲದಿದ್ದರೆ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಬೆಂಗಳೂರು, ಮೇ 25: ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 2.83 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 2.82 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 110.44 ರೂಪಾಯಿ ಮತ್ತು ಡೀಸೆಲ್ ದರ 98.39 ರೂಪಾಯಿಗೆ ತಲುಪಿದೆ. ಭಾರತವು ತನ್ನ ಕಚ್ಚಾ ತೈಲದ ಶೇ 85ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ, ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಯ ಅಡಚಣೆ, ಹಾಗೂ ರೂಪಾಯಿ ಅಪಮೌಲ್ಯವು ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವಾಗಿದೆ. ಅಲ್ಲದೆ, ತೈಲ ಕಂಪನಿಗಳು 76 ದಿನಗಳ ಕಾಲ ನಷ್ಟವನ್ನು ಭರಿಸಿದ್ದು, ಈಗ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಪೆಟ್ರೋಲ್ ಡೀಸೆಲ್ ದರದಲ್ಲಿ ರಾಜ್ಯ, ಕೇಂದ್ರದ ಪಾಲು

ಪೆಟ್ರೋಲ್, ಡೀಸೆಲ್ ಬೆಲೆಯ ಅರ್ಧದಷ್ಟು ಭಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹಾಗೂ ಸೆಸ್ ರೂಪದಲ್ಲಿರುತ್ತದೆ. ಉದಾಹರಣೆಗೆ, 100 ರೂಪಾಯಿ ಪೆಟ್ರೋಲ್‌ನಲ್ಲಿ ತೈಲ ಕಂಪನಿಗಳು ಕಚ್ಚಾ ಮತ್ತು ಸಂಸ್ಕರಣಾ ವೆಚ್ಚ, ಲಾಜಿಸ್ಟಿಕ್ಸ್‌ಗಾಗಿ 50-55 ರೂಪಾಯಿ ಪಡೆಯುತ್ತವೆ. ಪಂಪ್ ಡೀಲರ್‌ಗಳಿಗೆ ಮಾರಾಟ ಕಮಿಷನ್ ರೂಪದಲ್ಲಿ 3-4 ರೂಪಾಯಿ ಸಿಗುತ್ತದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ಸೆಸ್ ರೂಪದಲ್ಲಿ 11-15 ರೂಪಾಯಿ ಸಂಗ್ರಹಿಸಿದರೆ, ರಾಜ್ಯ ಸರ್ಕಾರಗಳು ವ್ಯಾಟ್ ಮತ್ತು ಲೇವಿಗಳ ಮೂಲಕ 25-30 ರೂಪಾಯಿ ಪಡೆಯುತ್ತವೆ.

ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣದ ಪರಿಹಾರ ಬೇಕಿದ್ದರೆ ಸರ್ಕಾರಗಳು ಅಬಕಾರಿ ಸುಂಕ ಮತ್ತು ವ್ಯಾಟ್ ಕಡಿತಗೊಳಿಸುವುದು ಅನಿವಾರ್ಯ. ಇಲ್ಲದಿದ್ದರೆ ಸಾರಿಗೆ ವೆಚ್ಚ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 25, 2026 01:45 PM
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More