ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಪ್ಲಾನ್ ಘೋಷಿಸಲು ಪ್ರಧಾನಿ ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ; ಸಂಜಯ್ ರಾವತ್ ಟೀಕೆ
ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯನ್ನು ಆರ್‌ಎಸ್‌ಎಸ್ ನಿರ್ಧರಿಸುತ್ತದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿಕೊಂಡಿದ್ದಾರೆ. ನಿನ್ನೆ ನಾಗ್ಪುರದ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ ಪಿಎಂ ನರೇಂದ್ರ ಮೋದಿಯವರ ಬಗ್ಗೆ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ಮೋದಿ ನಿವೃತ್ತಿ ಪಡೆಯಲಿದ್ದಾರೆ. ಈ ಬಗ್ಗೆ ಚರ್ಚಿಸಲು ಅವರು ಆರ್‌ಎಸ್‌ಎಸ್ ಕಚೇರಿಗೆ ತೆರಳಿದ್ದರು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಮುಂಬೈ, ಮಾರ್ಚ್ 31: ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ ಮತ್ತು ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಅವರ ಇತ್ತೀಚಿನ ಭೇಟಿಯೂ ಅದಕ್ಕೆ ಸಂಬಂಧಿಸಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ (Sanjay Raut) ಹೇಳಿದ್ದಾರೆ. ಕಳೆದ 10ರಿಂದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿರಲಿಲ್ಲ. ಆದರೆ ಈಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ “ಟಾಟಾ, ಬೈ, ಬೈ” ಹೇಳಲು ಅಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಮೋದಿ ಬಹುಶಃ ತಮ್ಮ ನಿವೃತ್ತಿ ಅರ್ಜಿಯನ್ನು ಸಲ್ಲಿಸಲು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಹೋಗಿರಬಹುದು ಎಂದು ಸಂಜಯ್ ರಾವತ್ ಹೇಳಿದ್ದಾರೆ. ಆರ್‌ಎಸ್‌ಎಸ್ ಭಾರತದ ನಾಯಕತ್ವದಲ್ಲಿ ಬದಲಾವಣೆಯನ್ನು ಬಯಸುತ್ತಿದೆ. ನಾನು ಅರ್ಥ ಮಾಡಿಕೊಂಡಂತೆ ಇಡೀ ಸಂಘ ಪರಿವಾರವು ದೇಶದ ನಾಯಕತ್ವದಲ್ಲಿ ಬದಲಾವಣೆಯನ್ನು ಬಯಸುತ್ತದೆ. ಪ್ರಧಾನಿ ಮೋದಿಯವರ ಸಮಯ ಮುಗಿದಿದೆ. ಆರ್‌ಎಸ್‌ಎಸ್ ಬದಲಾವಣೆಯನ್ನು ಬಯಸುತ್ತಿದೆ ಮತ್ತು ಅವರು ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಲು ಬಯಸುತ್ತಾರೆ ಎಂದು ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಜಯ್ ರಾವತ್ ಹೇಳಿದ್ದರು.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ