ಶಿಖರದ ತುದಿಗೆ ಘಟಸರ್ಪ ಅಡೀತ್ರಲೆ, ಭೂಲೋಕದ ಮುತ್ತು ಗಗನಕೇರೀತ್ರಲೇ: ಕಮ್ಮಾರಗಟ್ಟೆ ಕ್ಷೇತ್ರ ಪೂಜಾರಿಯಿಂದ ಕಾರ್ಣಿಕ
ದಾವಣಗೆರೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆಯ ಪೂಜಾರಿ ಗುಂಡ್ಯಪ್ಪ ಗಣಮಗ ಸಂಪ್ರದಾಯದಂತೆ ಕಾರ್ಣಿಕ ನುಡಿದಿದ್ದು, ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವ ಸುಳಿವು ನೀಡಿದ್ದಾರೆ. ಆದರೆ, ಅದರ ಜೊತೆಗೆಯೇ ದೇವರು ಜನರ ರಕ್ಷಣೆ ಮಾಡಲಿದ್ದಾರೆ ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸಿದ್ದಾರೆ. ಭಕ್ತರು ಇದನ್ನು ವಿಧವಿಧವಾಗಿ ವಿಶ್ಲೇಷಿಸುತ್ತಿದ್ದಾರೆ. ಕಾರ್ಣಿಕ ನುಡಿದ ವಿಡಿಯೋ ಇಲ್ಲಿದೆ.
ದಾವಣಗೆರೆ, ಜುಲೈ 30: ‘ಶಿಖರದ ತುದಿಗೆ ಘಟಸರ್ಪ ಅಡೀತ್ರಲೆ, ಭೂಲೋಕದ ಮುತ್ತು ಗಗನಕೇರೀತ್ರಲೇ’. ಇದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಆಂಜನೇಯ ಸ್ವಾಮೀ ಹಾಗೂ ಕಮ್ಮಾರಗಟ್ಟೆ ಗಿರಿಯಮ್ಮನ ಪುಣ್ಯಕ್ಷೇತ್ರದ ಅಂಜನೇಯನ ಪೂಜಾರಿ ಪೂಜಾರಿ ಗುಂಡ್ಯಪ್ಪ ನುಡಿದ ಕಾರ್ಣಿಕ (ಭವಿಷ್ಯವಾಣಿ). ಕಮ್ಮಾರಗಟ್ಟೆಯ ಹೊಳೆಯಾತ್ರೆಯಲ್ಲಿ ಗಣಮಗ ಸಂಪ್ರದಾಯದಂತೆ ಕಾರ್ಣಿಕ ನುಡಿಯಲಾಯಿತು. ‘ಶಿಖರದ ತುದಿಗೆ ಘಟಸರ್ಪ ಅಡೀತ್ರಲೆ’ ಎಂಬ ವಾಕ್ಯವನ್ನು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಬಹುದು, ಏನು ಬೇಕಾದರೂ ಆಗಬಹುದು ಎಂಬರ್ಥದಲ್ಲಿ ಭಕ್ತರು ವಿಶ್ಲೇಷಿಸುತ್ತಿದ್ದಾರೆ. ಜತೆಗೆ, ಬೆಳೆ ಹಾಗೂ ದಿನಸಿ ಬೆಲೆ ಹೆಚ್ಚಾಗಲಿದೆ ಎಂಬ ಸೂಚನೆ ಇದು ಎನ್ನುತ್ತಿದ್ದಾರೆ. ‘ಭೂಲೋಕದ ಮುತ್ತು ಗಗನಕೇರೀತ್ರಲೇ’ ಎಂಬುದನ್ನು, ಏನೇ ಆದರೂ ದೇವರಿದ್ದಾನೆ ಭಯಪಡಬೇಡಿ ಎಂದು ಅಭಯ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.