ಅಶ್ವಥ್ ನಾರಾಯಣಗೆ ಅಧಿಕಾರದ ಮದ ಮತ್ತು ಹಣದ ದರ್ಪ ತಲೆಗೇರಿದೆ: ಸಂಸದ ಡಿಕೆ ಸುರೇಶ
ಅಸಲು ಸಂಗತಿ ಏನು ಗೊತ್ತಾ? ಬಿಜೆಪಿ ಕೆಲ ನಾಯಕರಿಗೆ ಶಿವಕುಮಾರ ವಿರುದ್ಧ ಮಾತಾಡುವುದಷ್ಟೇ ಕೆಲಸ. ಅದನ್ನು ಮಾಡದೆ ಹೋದರೆ ಅವರನ್ನು ಕಸದಂತೆ ಟ್ರೀಟ್ ಮಾಡಲಾಗುತ್ತದೆ ಎಂದು ಸಂಸದ ಡಿಕೆ ಸುರೇಶ ಹೇಳಿದರು.
ಚಾಮರಾಜನಗರ: ಕಾಂಗ್ರೆಸ್ ಪಕ್ಷದ ಸಂಸದ ಡಿಕೆ ಸುರೇಶ (DK Suresh) ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಂಪುಟ ಸಚಿವ ಮತ್ತು ರಾಮನಗರ ಜಿಲ್ಲೆಯ ಉಸ್ತುವಾರಿಯಾಗಿರುವ ಡಾ ಅಶ್ವಥ್ ನಾರಾಯಣ (Dr Ashwath Narayan) ನಡುವಿನ ಜಗಳ ಬೇರೆ ಗ್ರಹದವರಿಗೂ ಗೊತ್ತು. ಕೆಲ ವಾರಗಳ ಹಿಂದೆ ರಾಮನಗರದಲ್ಲಿ (Ramanagara) ನಡೆದ ಸಮಾರಂಭವೊಂದರ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಚಿವ ಮತ್ತು ಸಂಸದ ಕಿತ್ತಾಡಿದ್ದರು. ಬುಧವಾರ ಚಾಮಾರಾಜನಗರ ಜಿಲ್ಲೆಯ ಹುನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಸುರೇಶ್ ಅವರು ಅಶ್ವಥ್ ನಾರಾಯಣ ಯಾಕೆ ಹಾಗಾಡುತ್ತಾರೆ ಅನ್ನೋದಿಕ್ಕೆ ತಮ್ಮದೇ ಆದ ವ್ಯಾಖ್ಯಾನ ನೀಡಿದರು. ಅಶ್ವಥ್ ನಾರಾಯಣ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಹೇಳಿದ ಸುರೇಶ್, ಅಧಿಕಾರದ ಮದ ಮತ್ತು ಹಣದ ದರ್ಪ ಅವರಿಗೆ ಹಾಗೆ ಮಾಡಿಸುತ್ತಿದೆ ಎಂದರು.
ಅವರ ಪಕ್ಷದ ನಾಯಕರ ಹಿನ್ನೆಲೆಗಳು ಅವರಿಗೆ ಗೊತ್ತಿಲ್ಲವೇ? ಸಿಡಿ ಬಾಯ್ಸ್ ಯಾರು, ಬಾಂಬೆ ಬಾಯ್ಸ್ ಯಾರು ಅಂತ ಅಶ್ವಥ್ ನಾರಾಯಣ ಅವರಿಗೆ ಚೆನ್ನಾಗಿ ಗೊತ್ತಿದೆ ಅಂತ ಸುರೇಶ್ ಹೇಳುತ್ತಿರುವಾಗಲೇ ಮಾಧ್ಯಮದವರೊಬ್ಬರು, ಕಾಂಗ್ರೆಸ್ ಮಹಾನಾಯಕನೇ ಸಿಡಿ ರೂವಾರಿ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂದಾಗ ಸುರೇಶ ಅವರು, ಸಿಡಿ ಯಾರು ಮಾಡಿದ್ದು ಅಂತ ತನಿಖೆ ಮಾಡಿಸಲಿ. ಈಡಿ, ಸಿಬಿಐ ಮೊದಲಾದ ಏಜೆನ್ಸಿಗಳೆಲ್ಲ ಅವರ ಹತೋಟಿಯಲ್ಲಿವೆ. ತನಿಖೆ ಮಾಡದಂತಿರಲು ನಾವೇನು ತಡೆಯೊಡ್ಡಿದ್ದೇವೆಯೇ, ದಿನಾಲೂ ನಾವು ಅವರಿಗೆ ಹೇಳುತ್ತಿದ್ದೇವೆ ಎಂದರು.
ನಮ್ಮ ವಿರುದ್ಧ ಮಾತಾಡುವವರಿಗೆಲ್ಲ ಉತ್ತರ ಕೊಡ್ತಾ ಕೂರಲ್ಲಾಗಲ್ಲ. ಅಸಲು ಸಂಗತಿ ಏನು ಗೊತ್ತಾ? ಬಿಜೆಪಿ ಕೆಲ ನಾಯಕರಿಗೆ ಶಿವಕುಮಾರ ವಿರುದ್ಧ ಮಾತಾಡುವುದಷ್ಟೇ ಕೆಲಸ. ಅದನ್ನು ಮಾಡದೆ ಹೋದರೆ ಅವರನ್ನು ಕಸದಂತೆ ಟ್ರೀಟ್ ಮಾಡಲಾಗುತ್ತದೆ ಎಂದು ಸಂಸದ ಡಿಕೆ ಸುರೇಶ ಹೇಳಿದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಹೇಳಿ ಉಚಿತವಾಗಿ ಬರೆಸಿಕೊಡಲಿ; ಈಗಲ್ಟನ್ ವಿಚಾರವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿಕೆ ಸುರೇಶ್