ಪ್ರಜ್ವಲ್ ಕೇಸ್: ಈ ಕೃತ್ಯ ಮಾಡಿಸಿದವರನ್ನು ಆ ದೇವರು ಸುಮ್ಮನೆ ಬಿಡಲ್ಲ: ಎ ಮಂಜು

ಪ್ರಜ್ವಲ್ ಕೇಸ್: ಈ ಕೃತ್ಯ ಮಾಡಿಸಿದವರನ್ನು ಆ ದೇವರು ಸುಮ್ಮನೆ ಬಿಡಲ್ಲ: ಎ ಮಂಜು

ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 07, 2024 | 3:30 PM

Arkalgud Manju vent anger against govt: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಅರಕಲಗೂಡಿನ ಜೆಡಿಎಸ್ ಶಾಸಕ ಎ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೇಸ್​ನಲ್ಲಿ ಸಂಬಂಧ ಇಲ್ಲದ ಎಚ್ ಡಿ ರೇವಣ್ಣರನ್ನು ವಿನಾಕಾರಣ ಸಿಲುಕಿಸಿದ್ದಾರೆ. ಯಾರೇ ಈ ಕೆಲಸ ಮಾಡಿದರೂ ಆ ದೇವರು ಕ್ಷಮಿಸಲ್ಲ ಎಂದು ಮಂಜು ಗುಡುಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಚಾರ ಹೊರಬರಲಿದೆ. ಯಾರು ಮಾಡಿಸಿದ್ದು, ಯಾರು ಮಾಡಿಸಿಲ್ಲ ಇವೆಲ್ಲಾ ಗೊತ್ತಾಗಲಿದೆ ಎಂದೂ ಮಾಜಿ ಸಚಿವರು ಹೇಳಿದ್ದಾರೆ.

ಹಾಸನ, ಮೇ 7: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna sex scandal) ಎಸ್​ಐಟಿಯಿಂದ ಸರಿಯಾಗಿ ತನಿಖೆ ಆಗುತ್ತಿಲ್ಲ, ರೇವಣ್ಣರನ್ನು ದ್ವೇಷದ ರಾಜಕಾರಣದಿಂದ ಬಂಧಿಸಲಾಗಿದೆ ಎಂದು ಆರೋಪಿಸಿ ಶಾಸಕ ಅರಕಲಗೂಡು ಮಂಜು (A Manju) ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ ಮಂಜು, ತನಗೆ ಈಗ ಎಸ್​ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ. ಸಿಬಿಐಗೆ ತನಿಖೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜ್ವಲ್ ಪ್ರಕರಣದಲ್ಲಿ ಸಂಬಂಧ ಇಲ್ಲದ ಎಚ್ ಡಿ ರೇವಣ್ಣರನ್ನು ಬಂಧಿಸಿರುವುದಕ್ಕೆ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿನಾಕಾರಣ ಈ ಕೇಸ್​ನಲ್ಲಿ ರೇವಣ್ಣನ ತಂದಿದ್ದು ತಪ್ಪು. ಯಾವ ರಾಜಕಾರಣಿ ಕೂಡ ಈ ರೀತಿಯ ದ್ವೇಷದ ರಾಜಕಾರಣ ಮಾಡಬಾರದು. ವೈಯಕ್ತಿಕವಾದ ದ್ವೇಷದ ರಾಜಕಾರಣ ಮಾಡಬಾರದು. ಕುಟುಂಬ ರಾಜಕೀಯದ ವಿರುದ್ಧ ಇಷ್ಟು ಹೀನಾಯವಾಗಿ ದ್ವೇಷದ ರಾಜಕಾರಣ ಮಾಡೋದು ಒಳ್ಳೇದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೆಲಸ ಮಾಡಿದ್ದಾರಲ್ಲ, ಅವರನ್ನು ಆ ದೇವರು ಕ್ಷಮಿಸೋದಿಲ್ಲ. ಯಾರು ಏನು ಬೇಕಾದರೂ ಅಂದುಕೊಳ್ಳಲಿ, ದೇವರು ಅವರಿಗೆ ತಕ್ಕ ಪಾಠ ಕಲಿಸುತ್ತಾನೆ. ಈಗ ನೋಡಿ ಅವರವರೇ ಹೇಳಿಕೊಳ್ಳುತ್ತಿದ್ದಾರೆ. ಯಾರು ಮಾಡ್ಸಿದಾರೆ, ಯಾರು ಮಾಡ್ಸಿಲ್ಲ, ಇದೆಲ್ಲಾ ಈಚೆ ಬರ್ತಿದೆ ಎಂದು ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದಲೂ ಶಾಸಕರಾಗಿ ಆಯ್ಕೆಯಾಗಿದ್ದ ಮಂಜು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕ್ಯಾಂಡಿಡೇಟ್ ಆಗೋದು ಬೇಡ ಅಂದಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಎಚ್​ಡಿಕೆ

ಇದು ಸಾಂಕೇತಿಕವಾದಂತಹ ಪ್ರತಿಭಟನೆ. ಮುಂದಿನ ದಿನಗಳಲ್ಲಿ ನಮ್ಮ ಅಧ್ಯಕ್ಷರು ತೀರ್ಮಾನ ತೆಗೆದುಕೊಂಡರೆ ಅದ್ಭುತವಾದಂತಹ, ಬೃಹತ್ ಆದಂತಹ ಪ್ರತಿಭಟನೆ ನಡೆಸೋಣ. ಜೆಡಿಎಸ್ ಅಂದರೆ ಹಾಸನ ಎಂದು ರುಜುವಾತು ಮಾಡೋಣ ಎಂದು ಕಾರ್ಯಕರ್ತರಿಗೆ ಮಂಜು ಕರೆ ನೀಡಿದ್ದಾರೆ.

ಅರಕಲಗೂಡು ಮಂಜು ಮೂಲತಃ ಬಿಜೆಪಿಯಲ್ಲಿದ್ದವರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಮತ್ತೆ ವಾಪಸ್ ಬಿಜೆಪಿ ಸೇರಿದ್ದರು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಜೆಡಿಎಸ್ ಪಕ್ಷ ಸೇರಿದರು. ಅರಕಲಗೂಡು ಕ್ಷೇತ್ರದಲ್ಲಿ ಅವರು ಮೂರೂ ಪಕ್ಷಗಳಿಂದ ಗೆದ್ದ ಒಂದು ದಾಖಲೆ ಹೊಂದಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ