ಪ್ರಜ್ವಲ್ ಪ್ರಕರಣ: ಸಂತ್ರಸ್ತೆ ರಕ್ಷಣೆಯಾದ ಮೈಸೂರಿನ ತೋಟದ ಮನೆಯ ನೆರೆಯವರು ಹೇಳೋದೇನು?
HD Revanna PA Rajagopal's farmhouse: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯೊಬ್ಬರನ್ನು ಎಸ್ಐಟಿ ಪೊಲೀಸರು ರಕ್ಷಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಎಚ್.ಡಿ. ರೇವಣ್ಣ ಅವರ ಪಿಎ ರಾಜಗೋಪಾಲ್ ಎಂಬುವವರ ಕೆ ಆರ್ ನಗರ ತೋಟದ ಮನೆಯಲ್ಲಿ ಸಂತ್ರಸ್ತೆ ಇದ್ದರೆನ್ನಲಾಗಿದೆ. ಈ ಫಾರ್ಮ್ಹೌಸ್ನ ಪಕ್ಕದ ನಿವಾಸಿಯಾದ ನಟೇಶ್ ಎಂಬುವವರು ಟಿವಿ9 ಜೊತೆ ಮಾತನಾಡಿ ಸಂತ್ರಸ್ತೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಮೈಸೂರು, ಮೇ 5: ಪ್ರಜ್ವಲ್ ರೇವಣ್ಣ ವಿರುದ್ಧದ ರಾಸಲೀಲೆ ಪ್ರಕರಣದಲ್ಲಿ (Prajwal Revanna sex scandal) ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯೊಬ್ಬಳನ್ನು (victim woman) ಎಸ್ಐಟಿ ಪೊಲೀಸರು ರಕ್ಷಿಸಿದ್ದಾರೆ. ಎಚ್.ಡಿ. ರೇವಣ್ಣ ಅವರ ಆಪ್ತ ಸಹಾಯಕ ರಾಜಗೋಪಾಲ್ (Rajagopal) ಅವರಿಗೆ ಸೇರಿದ ಫಾರ್ಮ್ ಹೌಸ್ನಲ್ಲಿದ್ದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಲಾಗಿದೆ. ಈ ತೋಟದ ಮನೆಯ ಅಕ್ಕಪಕ್ಕದ ನಿವಾಸಿಗಳು ಸಂತ್ರಸ್ತೆಯನ್ನು ಕಂಡಿದ್ದಾರೆ. ನಟೇಶ್ ಎಂಬ ವ್ಯಕ್ತಿ ಟಿವಿ9 ಜೊತೆ ಮಾತನಾಡಿ, ತಾನು ಸಂತ್ರಸ್ತೆ ಜೊತೆ ಮಾತನಾಡಿಯೂ ಇದ್ದೇನೆ ಎಂದಿದ್ದಾರೆ. ಆ ಮಹಿಳೆ ತಾನು ಎಚ್.ಡಿ. ಕೋಟೆಯವ್ರು ಅಂತ ಹೇಳಿಕೊಂಡ್ರು. ಯಜಮಾನ್ರು ತೋಟದಲ್ಲವ್ರೆ, ಅವ್ರಿಗೆ ದುಡ್ಡು ಕೊಡೋಕೆ ಬಂದಿದೀನಿ ಅಂತ ಅಂತ ಅಂದ್ರು. ಆವಕ್ಕನ ಜೊತೆ ಎರಡು ದಿನ ಮಾತನಾಡಿಸಿದೀನಿ ಎಂದು ನಟೇಶ್ ಹೇಳಿದ್ದಾರೆ.
ಎಚ್.ಡಿ. ರೇವಣ್ಣ ಸೂಚನೆ ಮೇರೆಗೆ ರಾಜಗೋಪಾಲ್ ಈ ಮಹಿಳೆಯನ್ನು ಅಪಹರಿಸಿರಬಹುದು ಎಂಬ ಶಂಕೆ ಇದೆ. ಸಂತ್ರಸ್ತೆಯನ್ನು ಎಸ್ಐಟಿ ಪೊಲೀಸರು ರಕ್ಷಣೆ ಮಾಡಿದಾಗಿನಿಂದ ರಾಜಗೋಪಾಲ್ ನಾಪತ್ತೆಯಾಗಿದ್ದಾರೆ. ಗ್ರಾಮಸ್ಥ ನಟೇಶ್ ಪ್ರಕಾರ ರಾಜಗೋಪಾಲ್ ಇಲ್ಲಿ ಬಡವರಿಗೆ ಬಹಳ ಸಹಾಯ ಮಾಡುತ್ತಾರಂತೆ. ಹಾಗೆಯೇ ರೇವಣ್ಣ ಈ ತೋಟದ ಮನೆಗೆ ಬಂದಿದ್ದನ್ನು ಒಮ್ಮೆಯೂ ನೋಡಿಲ್ಲ. ತೋಟದ ಮನೆಗೆ ಬಂದಿದ್ದ ಮಹಿಳೆ ಅತ್ಯಾಚಾರ ಸಂತ್ರಸ್ತೆ ಎಂದು ಗೊತ್ತಾಗಿದ್ದೇ ಈಗ ಎಂದು ಇವರು ಹೇಳುತ್ತಾರೆ.
ಇದನ್ನೂ ಓದಿ: ರೇವಣ್ಣ ಒಂಟಿ ಸಲಗ, ಎಲ್ಲಿ ಬಾಯಾರಿತೋ ಅಲ್ಲಿ ನೀರು ಕುಡಿಯೋ ಬಸವ ಇದ್ದಂಗೆ: ಗ್ರಾಮಸ್ಥನೊಬ್ಬನ ಅಭಿಮಾನದ ಮಾತು
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ