Assembly Polls: ಲಕ್ಷ್ಮಿ ಹೆಬ್ಬಾಳ್ಕರ್-ರಮೇಶ ಜಾರಕಿಹೊಳಿ ನಡುವಿನ ಜಿದ್ದಿನಲ್ಲಿ ಇಬ್ಬರಿಂದಲೂ ಬಾಚಿಕೊಳ್ಳುವ ಮತದಾರನೇ ಜಾಣ!

|

Updated on: Jan 22, 2023 | 8:02 AM

ಲಕ್ಷ್ಮಿಯವರು ಹಲವಾರು ವರ್ಷಗಳಿಂದ ಸಕ್ರಿಯ ರಾಜಕಾರದಲ್ಲಿರುವುದರಿಂದ ಅವರಿಗೆ ಇಂತದ್ದೆನ್ನೆಲ್ಲ ಎದುರಿಸಿ ಗೊತ್ತಿದೆ. ರಮೇಶ್ ಏನೇ ತಿಪ್ಪರಲಾಗ ಹಾಕಿದರೂ ಗೆದ್ದೇ ತೀರುತ್ತೇನೆಂದು ಶಪಥಗೈದಿದ್ದಾರೆ.

ಬೆಳಗಾವಿ:  ನಮ್ಮ ರಾಜಕಾರಣಿಗಳಿಗೆ (politicos) ಚುನಾವಣೆ ಸಮಯದಲ್ಲಿ ಅದೆಲ್ಲಿಂದ ದುಡ್ಡು ಬರುತ್ತೆ ಅಂತ ಆದಾಯ ತೆರಿಗೆ ಇಲಾಖೆಯವರಿಗೂ ಗೊತ್ತಾಗದು! ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅವರು ಖರ್ಚು ಮಾಡುವ ಪರಿ ನೋಡಿದರೆ ದಿಗಿಲು ಮೂಡುತ್ತದೆ. ನಾವು ಉಲ್ಲೇಖಿಸುತ್ತಿರುವ ಬೆಳಗಾವಿ ಜಿಲ್ಲೆಯ ಇಬ್ಬರು ಪ್ರಭಾವಿ ರಾಜಕಾರಣಿಗಳು-ಕಾಂಗ್ರೆಸ್ ಪಕ್ಷದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮತ್ತು ಬಿಜೆಪಿಯ ರಮೇಶ ಜಾರಕಿಹೊಳಿ (Ramesh Jarkiholi) ನಿಸ್ಸಂದೇಹವಾಗಿ ಶ್ರೀಮಂತರು, ಸಂದೇಹವೇ ಬೇಡ. ಸಕ್ಕರೆ ಕಾರ್ಖಾನೆಗಳ ಒಡೆಯ ಒಡತಿಯರು ಅಂದರೆ ಸುಮ್ನೇನಾ? ಅವರ ನಡುವೆ ಅದ್ಯಾವುದೋ ಕಾರಣಕ್ಕೆ ಛಲ ಹುಟ್ಟಿ ಈಗ ಹೆಮ್ಮರವಾಗಿ ಬೆಳೆದಿದೆ.

ರಮೇಶ ಜಾರಕಿಹೊಳಿ ಅವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೇ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಫರ್ಧಿಸುವ ಲಕ್ಷ್ಮಿ ಅವರನ್ನು ಸೋಲಿಸಿಯೇ ತೀರುವ ಛಲ ತೊಟ್ಟಿದ್ದಾರೆ. ಹಾಗೆ ನೋಡಿದರೆ, ರಮೇಶ್ ಅವರ ಕ್ಷೇತ್ರ ಗೋಕಾಕ. ಅವರಿಗೆ ಇಲ್ಲಿ ಪುನಃ ಗೆಲ್ಲುವ ಬಗ್ಗೆ ಯಾವುದೇ ಅನುಮಾನ ಇದ್ದಂತಿಲ್ಲ. ಹಾಗಾಗಿ, ಅವರು ತಮ್ಮೆಲ್ಲ ಗಮನ, ಹಣ, ತಂತ್ರಗಾರಿಕೆ ಮತ್ತು ಸಂಪನ್ಮೂಲಗಳನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವ್ಯಯಿಸುತ್ತಿದ್ದಾರೆ. ಗುರಿ ಅದೇ-ಲಕ್ಷ್ಮೀ ಅವರನ್ನು ಸೋಲಿಸುವುದು!

ಇದನ್ನೂ ಓದಿ:  MEA: ಕುವೈತ್​ ನರಕದಿಂದ ಪಾರು ಮಾಡಲು ವಿದೇಶಾಂಗ ಇಲಾಖೆಗೆ ಮೊರೆಯಿಟ್ಟ ಕೊಡಗು ಕಾರ್ಮಿಕ ಮಹಿಳೆ

ಲಕ್ಷ್ಮಿಯವರು ಹಲವಾರು ವರ್ಷಗಳಿಂದ ಸಕ್ರಿಯ ರಾಜಕಾರದಲ್ಲಿರುವುದರಿಂದ ಅವರಿಗೆ ಇಂತದ್ದೆನ್ನೆಲ್ಲ ಎದುರಿಸಿ ಗೊತ್ತಿದೆ. ರಮೇಶ್ ಏನೇ ತಿಪ್ಪರಲಾಗ ಹಾಕಿದರೂ ಗೆದ್ದೇ ತೀರುತ್ತೇನೆಂದು ಶಪಥಗೈದಿದ್ದಾರೆ. ಅವರಿಗೆ ಪಕ್ಷದ ಹಿರಿಯ ನಾಯಕರ ಬೆಂಬಲವಂತೂ ಇದ್ದೇ ಇದೆ, ಖುದ್ದು ಅವರು ಬರೀ ತಮ್ಮ ಕ್ಷೇತ್ರದಲ್ಲಿ ಮಾತ್ರ ಅಲ್ಲ ಬೆಳಗಾವಿ ಜಿಲ್ಲೆಯಲ್ಲಿ ಚೆನ್ನಾಗಿ ಹೆಸರು ಮಾಡಿದ್ದಾರೆ.

ಓಕೆ, ನಾವು ಆರಂಭದಲ್ಲಿ ಖರ್ಚಿನ ವಿಷಯ ಮಾತಾಡಿದ್ದು ಯಾಕೆಂದರೆ, ರಮೇಶ್ ಅವರು ಮೊನ್ನೆಯಷ್ಟೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಒಂದೂರಲ್ಲಿ ಸಾವಿರಾರು ಸೀರೆಗಳನ್ನು ತಮ್ಮ ನೆಚ್ಚಿನ ಬಂಟನೊಬ್ಬನ ಮುಖಾಂತರ ವಿತರಿಸಿದ ವಿಡಿಯೋವನ್ನು ನಿಮಗೆ ತೋರಿಸಿದ್ದೆವು. ಶನಿವಾರ ಲಕ್ಷ್ಮಿ ಅವರು ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ಜನರಿಗೆ ಮಿಕ್ಸರ್ ಮತ್ತು ಪಾತ್ರೆ ಪಗಡೆಗಳನ್ನು ಹಂಚಿದ್ದಾರೆ. ನಾಳೆ ಅಥವಾ ನಾಡಿದ್ದು ರಮೇಶ್ ಇಲ್ಲಿಗೆ ಬಂದು ಬೇರೆ ಏನನ್ನಾದರೂ ಹಂಚಬಹುದು!

ಇದನ್ನೂ ಓದಿ:  Children’s Mental Health: ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಈ ಸಲಹೆ ಪಾಲಿಸಿ

ಈ ಇಬ್ಬರು ಪಳಗಿದ ರಾಜಕಾರಣಿಗಳು ಒಂದು ವಿಷಯವನ್ನು ಮರೆತಿದ್ದಾರೆ ಮಾರಾಯ್ರೇ. ಜನ ಈಗ ಇವರು ಅಂದುಕೊಂಡಷ್ಟು ಮೂರ್ಖರಾಗಿ ಉಳಿದಿಲ್ಲ. ಅವರು ಚೆನ್ನಾಗಿ ಯೋಚಿಸಿ ಯಾರು ಸರಿ-ಯಾರು ತಪ್ಪು, ಯಾರಿಂದ ತಮಗೆ, ತಮ್ಮ ಕುಟುಂಬಕ್ಕೆ ಮತ್ತು ಊರಿಗೆ ಅಥವಾ ಕ್ಷೇತ್ರಕ್ಕೆ ಹೆಚ್ಚು ಉಪಯೋಗವಾಗುತ್ತದೆ ಅಂತ ನಿರ್ಧರಿಸುವಷ್ಟು ಸಮರ್ಥರಾಗಿದ್ದಾರೆ.

ಹಾಗಾಗಿ, ಅವರು ಖಂಡಿತವಾಗಗಿ ಇಬ್ಬರಿಂದಲೂ (ಮೂರನೇಯವರೂ ಸೇರಬಹುದು!) ಹಣ, ಗಿಫ್ಟ್ ಗಳನ್ನು ಸ್ವೀಕರಿಸುತ್ತಾರೆ, ಆದರೆ ವೋಟು ಮಾತ್ರ ತಮ್ಮ ವಿವೇಚನೆಗೆ ಅನುಗುಣವಾಗಿ ಚಲಾಯಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.