AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ಭಾರಿ ಅಗ್ನಿ ಅನಾಹುತ, ಸುಟ್ಟು ಕರಕಲಾಯ್ತು 40 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್

ನೆಲಮಂಗಲ: ಭಾರಿ ಅಗ್ನಿ ಅನಾಹುತ, ಸುಟ್ಟು ಕರಕಲಾಯ್ತು 40 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್

ನವೀನ್ ಕುಮಾರ್ ಟಿ
| Edited By: |

Updated on:Feb 06, 2026 | 7:12 AM

Share

ಖಾಸಗಿ ಬಸ್ಸೊಂದು ನೆಲಮಂಗಲದ ಹನುಮಂತಪುರ ಗೇಟ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬೆಂಕಿಹೊತ್ತಿಕೊಂಡ ಕಾರಣ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಬಸ್​​ನಲ್ಲಿದ್ದ 40 ಮಂದಿ ಪ್ರಯಾಣಿಕರು, ಚಾಲಕ ಹಾಗೂ ನಿರ್ವಾಹಕ ಹೊರಗಿಳಿದು ಪಾರಾಗಿದ್ದರಿಂದ ಸಾವು-ನೋವು ತಪ್ಪಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿ ಶಮನಗೊಳಿಸಿದ್ದಾರೆ.

ನೆಲಮಂಗಲ, ಫೆಬ್ರವರಿ 6: ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿ ಖಾಸಗಿ ಬಸ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ‘ಸಂಜನಾ ಟ್ರಾವೆಲ್ಸ್’ಗೆ ಸೇರಿದ ಬಸ್ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ. ಹೆದ್ದಾರಿ ಕಾಮಗಾರಿ ಹಿನ್ನೆಲೆ ಬಸ್ ನಿಧಾನವಾಗಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರು ಇದ್ದರು. ಬೆಂಕಿ ಕಾಣುತ್ತಿದ್ದಂತೆ ಚಾಲಕ ಹಾಗೂ ಪ್ರಯಾಣಿಕರು ತಕ್ಷಣ ಬಸ್‌ನಿಂದ ಹೊರಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಕಿಯ ತೀವ್ರತೆ ಹೆಚ್ಚಾಗಿ ಬಸ್ ಸಂಪೂರ್ಣ ಸುಟ್ಟು ನಾಶವಾಗಿದೆ. ಸ್ಥಳಕ್ಕೆ ತಕ್ಷಣ ಆಗಮಿಸಿದ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿರುವುದರಿಂದ ಲಗೇಜ್ ಬಾಕ್ಸ್​ನಲ್ಲಿ ಇಟ್ಟಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ. ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡು ಪ್ರಯಾಣಿಕರು ಕಣ್ಣೀರಿಡುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 06, 2026 07:07 AM