ಕನ್ನಡದ ಚಿತ್ರರಂಗದಲ್ಲಿ ಕೋಟಿಗಳಲ್ಲಿ ಸಂಭಾವನೆ ಪಡೆವ ಪರಂಪರೆ ಅರಂಭವಾಗಿದ್ದು ಪುನೀತ್ ರಾಜಕುಮಾರ್ ಅವರಿಂದ!
ಪುನೀತ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರಾದರೂ ಅವರ ಅಸಲು ಹೆಸರು ಲೋಹಿತ್ ಆಗಿತ್ತು. ಬಾಲನಟನಾಗಿದ್ದಾಗ ಅವರಿಗೆ ಮಾಸ್ಟರ್ ಲೋಹಿತ್ ಅಂತಲೇ ಹೆಸರಿತ್ತು.
ಪುನೀತ್ ರಾಜಕುಮಾರ್ ಮರಣಿಸಿ ನಾಲ್ಕು ದಿನ ಕಳೆದಿದೆ. ಕನ್ನಡನಾಡು, ಕನ್ನಡ ಚಿತ್ರರಂಗ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅವರ ಕುಟುಂಬವಂತೂ ಯಾವತ್ತೂ ಚೇತರಿಸಿಕೊಳ್ಳಲಾರದು. ಆದರೆ ಪುನೀತ್ ಅವರನ್ನು ನೆನೆಯುತ್ತಾ ಅವರ ಕುರಿತಾದ ವಿಷಯಗಳನ್ನು ಜ್ಞಾಪಿಸಿಕೊಂಡರೆ ಮನಸ್ಸು ಸ್ವಲ್ಪ ಹಗುರವಾಗುತ್ತದೆ. ಕೇವಲ ಒಂದು ವರ್ಷದ ಕೂಸಾಗಿದ್ದಾಲೇ ಅಪ್ಪನ ಜೊತೆ ತೆರೆಯ ಮೇಲೆ ಕಾಣಿಸಿಕೊಂಡ ಅಪ್ಪುಗೆ ನಾಯಕನಟನಾಗಿ ಬಡ್ತಿ ಪಡೆಯುವ ಮೊದಲೇ ಅಭಿಮಾನಿಗಳಿದ್ದರು ಅನ್ನೋದು ಉತ್ಪ್ರೇಕ್ಷೆಯ ಮಾತಲ್ಲ. ಮಾರ್ಚ್ 17, 1975 ರಂದು ಅವರು ಚೆನೈ (ಆಗಿನ ಮದ್ರಾಸ್) ನಗರದ ಒಂದು ಮಿಷನ್ಆಸ್ಪತ್ರೆಯಲ್ಲಿ ಪುನೀತ್ ಜನಿಸಿದಾಗ ಅಣ್ಣಾವ್ರು ಆಗಿನ ಸೂಪರ್ ಹಿಟ್ ಸಿನಿಮಾ ‘ಮಯೂರ’ ದ ಶೂಟಿಂಗ್ ನಲ್ಲಿದ್ದರಂತೆ. ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಎಲ್ಲಾ 5 ಮಕ್ಕಳು ಅದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.
ಪುನೀತ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರಾದರೂ ಅವರ ಅಸಲು ಹೆಸರು ಲೋಹಿತ್ ಆಗಿತ್ತು. ಬಾಲನಟನಾಗಿದ್ದಾಗ ಅವರಿಗೆ ಮಾಸ್ಟರ್ ಲೋಹಿತ್ ಅಂತಲೇ ಹೆಸರಿತ್ತು. ನಂತರದ ದಿನಗಳಲ್ಲಿ ಅದು ಪುನೀತ್ ಅಗಿ ಬದಲಾಯಿತು. ತಮಿಳು ಸೂಪರ್ ಸ್ಟಾರ್ ಕಮಲಹಾಸನ್ ಅವರಂತೆ ಅಪ್ಪು ಸಹ ಶಾಲೆಗೆ ಹೋಗಲಿಲ್ಲ.
ಹೌದು, ಅವರ ಬಳಿ ಯಾವುದೇ ಯಾವುದೇ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಇರಲಿಲ್ಲ. ಖಾಸಗಿ ಟ್ಯೂಶನ್ ಮೂಲಕ ಅವರು ವಿದ್ಯಾಭ್ಯಾಸ ಮಾಡಿದರು. ಬಾಲ್ಯದಲ್ಲೇ, ಮಾರ್ಷಲ್ ಆರ್ಟ್ಸ್ನಲ್ಲಿ ಪರಿಣಿತಿ ಸಾಧಿಸಿದ್ದರಿಂದ ಅವರ ಸಿನಿಮಾಗಳಲ್ಲಿ ಫೈಟ್ ಸೀನ್ಗಳು ನೈಜ ಅನಿಸುತ್ತಿದ್ದವು.
ಡಾ ರಾಜ್ ಗರಡಿಯಲ್ಲೇ ಬೆಳೆದ ಪುನೀತ್ ಅವರು ತಂದೆಯ ಹಾಗೆ ಗಾಯಕರೂ ಆಗಿದ್ದು ವಿಶೇಷ. ಅಂದಹಾಗೆ, ಪುನೀತ್ ನಾಯಕ ನಟನಾಗಿ ನಟಿಸುವ ಮೊದಲು ತಮ್ಮನ್ನು ಬಿಸಿನೆಸ್ನಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಪೂರ್ಣಿಮಾ ಪ್ರೊಡಕ್ಷನ್ ಹೌಸ್ ವ್ಯವಹಾರಗಳನ್ನು ಅವರು ನೋಡಿಕೊಳ್ಳುತ್ತಿದ್ದರು.
ಅವರ ಬಗ್ಗೆ ಮತ್ತೊಂದು ಸಂಗತಿಯನ್ನು ಉಲ್ಲೇಖಿಸಲೇಬೇಕು. ಕನ್ನಡ ಚಿತ್ರರಂಗದಲ್ಲಿ ಕೋಟಿ ಸಂಪಾದನೆ ಪಡೆದ ಮೊಟ್ಟಮೊದಲ ನಟ ಪುನೀತ್!
ಇದನ್ನೂ ಓದಿ: ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು ಅಲುಗಾಡಿದ ವಿಡಿಯೋ ವೈರಲ್; ಪೀಠಾಧಿಪತಿಗಳಿಂದ ಸ್ಪಷ್ಟನೆ