ಸಿಎಂ ಸಿದ್ದರಾಮಯ್ಯ ವಿರುದ್ಧ 24 ಕೊಲೆ ಮಾಡಿದ ಆರೋಪ, ಎಸ್ಐಟಿ ರಚಿಸ್ತೀರಾ: ಸರ್ಕಾರಕ್ಕೆ ಅಶೋಕ್ ಪ್ರಶ್ನೆ
ಮಹೇಶ್ ಶೆಟ್ಟಿ ತಿಮರೋಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕೊಲೆ ಆರೋಪ ಮಾಡಿದ ಹಿನ್ನೆಲೆಯಲ್ಲಿ, ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಪ್ರಕರಣದಂತೆ ಈ ಆರೋಪದ ಬಗ್ಗೆಯೂ ಎಸ್ಐಟಿ ರಚಿಸುತ್ತೀರಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರದ ಎಡಬಿಡಂಗಿತನವನ್ನು ಖಂಡಿಸಿದ್ದಾರೆ.
ಬೆಂಗಳೂರು, ಆಗಸ್ಟ್ 18: ಯಾರು ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಅಪಚಾರ ಮಾಡುತ್ತಾ ಇದ್ದಾರೆಯೋ ಅದೇ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದೂ ಆಗ್ರಹಿಸಿದ್ದಾರೆ. ಧರ್ಮಸ್ಥಳದ ಬಗ್ಗೆ ಆರೋಪ ಬಂದ ಕೂಡಲೇ ಎಸ್ಐಟಿ ರಚನೆ ಮಾಡಿದ ಸರ್ಕಾರ ಈಗ ಸಿಎಂ ವಿಚಾರದಲ್ಲಿ ಬಂದ ಆರೋಪಕ್ಕೂ ಎಸ್ಐಟಿ ರಚನೆ ಮಾಡುತ್ತದೆಯೇ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು. ವಿಧಾನಸೌಧ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಶೋಕ್, ಧರ್ಮಸ್ಥಳ ಎಂದ ಕೂಡಲೇ ಎಸ್ಐಟಿ ರಚನೆ ಮಾಡಿದವರು ಸಿಎಂ ವಿರುದ್ಧದ ಆರೋಪದ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ನ ಎಡಬಿಡಂಗಿತನ ಇದರಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಮುಖ್ಯಮಂತ್ರಿ ವಿರುದ್ಧ ಮಾಡಿರುವ ಕೊಲೆ ಆರೋಪ ಸತ್ಯವೋ ಅಲ್ಲವೋ ಎಂದು ತನಿಖೆಗೆ ಎಸ್ಐಟಿ ರಚನೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
Published on: Aug 18, 2025 12:58 PM