ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ; ರಾಹುಲ್ ಗಾಂಧಿ ಹೊಸ ಬಾಂಬ್
ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಫಲಿತಾಂಶಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹರಿಯಾಣದಲ್ಲಿ ಭಾರೀ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಒಟ್ಟು 2 ಕೋಟಿ ಮತದಾರರಿರುವ ಹರಿಯಾಣದಲ್ಲಿ 25 ಲಕ್ಷ ಮತಗಳು ಕಳವಾಗಿವೆ ಎಂದು ಅವರು ಆರೋಪಿಸಿದ್ದಾರೆ.
ನವದೆಹಲಿ, ನವೆಂಬರ್ 5: ಕಳೆದ ವರ್ಷ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ (Haryana Assembly Elections) ಭಾರಿ ಮತ ವಂಚನೆ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಆರೋಪಿಸಿದ್ದಾರೆ. ಒಟ್ಟು 2 ಕೋಟಿ ಮತದಾರರಿರುವ ಹರಿಯಾಣದಲ್ಲಿ 25 ಲಕ್ಷ ಮತಗಳು ಕಳವಾಗಿವೆ ಎಂದು ಅವರು ಆರೋಪಿಸಿದ್ದಾರೆ. “ನಾನು ಚುನಾವಣಾ ಆಯೋಗ ಮತ್ತು ಭಾರತದಲ್ಲಿನ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇನೆ ಮತ್ತು ಇದಕ್ಕೆ ಶೇ. 100ರಷ್ಟು ಸಾಕ್ಷಿಗಳನ್ನು ಇಟ್ಟುಕೊಂಡು ಈ ಆರೋಪ ಮಾಡುತ್ತಿದ್ದೇನೆ. ಕಾಂಗ್ರೆಸ್‌ನ ಅಗಾಧ ಗೆಲುವನ್ನು ಸೋಲಾಗಿ ಪರಿವರ್ತಿಸಲು ಒಂದು ಯೋಜನೆಯನ್ನು ರೂಪಿಸಲಾಗಿದೆ ಎಂಬುದು ನಮಗೆ ಖಚಿತವಾಗಿದೆ” ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಒಂದು ಉದಾಹರಣೆಯನ್ನು ಕೂಡ ನೀಡಿದ ರಾಹುಲ್ ಗಾಂಧಿ, ಹರಿಯಾಣದ ಮತದಾರರ ಪಟ್ಟಿಯಲ್ಲಿ ಮಹಿಳೆಯ ಫೋಟೋದೊಂದಿಗೆ 22 ಬೇರೆ ಬೇರೆ ಹೆಸರುಗಳಿರುವ ದಾಖಲೆಯನ್ನು ಪ್ರದರ್ಶಿಸಿದ್ದಾರೆ. ಬ್ರೆಜಿಲ್ ಮಾಡೆಲ್ ಒಬ್ಬರ ಫೋಟೋವನ್ನು ಹಂಚಿಕೊಂಡ ರಾಹುಲ್ ಗಾಂಧಿ, “ಈ ಫೋಟೋವನ್ನು ಸ್ಟಾಕ್ ಫೋಟೋಗಳನ್ನು ನಿರ್ವಹಿಸುವ ವೆಬ್‌ಸೈಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಬ್ರೆಜಿಲಿಯನ್ ಮಹಿಳೆಯ ಫೋಟೋ ಮತದಾರರ ಪಟ್ಟಿಯಲ್ಲಿ ಸ್ವೀಟಿ, ಸೀಮಾ, ಸರಸ್ವತಿ ಎಂಬ ವಿವಿಧ ಹೆಸರುಗಳಲ್ಲಿ 22 ಬಾರಿ ಕಾಣಿಸಿಕೊಂಡಿದೆ. ಅವರು ಹರಿಯಾಣದಲ್ಲಿ 10 ವಿಭಿನ್ನ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೊಸ ಬಾಂಬ್ ಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ