IPL 2025: ಜಿತೇಶ್ ಶರ್ಮಾಗೆ ನಾಯಕತ್ವ ಹಸ್ತಾಂತರಿಸಿದ್ದ ಆರ್‌ಸಿಬಿ; ಶಾಕಿಂಗ್ ವಿಡಿಯೋ
RCB's Captaincy Change: ಐಪಿಎಲ್ 2025ರ ಸ್ಥಗಿತದಿಂದಾಗಿ ಆರ್‌ಸಿಬಿ ತಂಡದ ನಾಯಕತ್ವ ಬದಲಾವಣೆ ಮುಂದೂಡಲ್ಪಟ್ಟಿದೆ. ರಜತ್ ಪಟಿದಾರ್ ಗಾಯಗೊಂಡಿದ್ದರಿಂದ ಜಿತೇಶ್ ಶರ್ಮಾ ಅವರಿಗೆ ನಾಯಕತ್ವ ನೀಡಲು ಆರ್‌ಸಿಬಿ ಯೋಚಿಸುತ್ತಿತ್ತು. ಜಿತೇಶ್ ಶರ್ಮಾ ನಾಯಕತ್ವಕ್ಕಾಗಿ ತಯಾರಿ ನಡೆಸಿದ್ದರು ಎಂದು ಹೇಳಿದ್ದಾರೆ. ಆದರೆ ಪಾಕಿಸ್ತಾನದ ದಾಳಿಯಿಂದಾಗಿ ಐಪಿಎಲ್ ಸ್ಥಗಿತಗೊಂಡು ಅವರ ಆಸೆ ಈಡೇರಲಿಲ್ಲ.
ಎಲ್ಲವೂ ಪೂರ್ವ ನಿಗದಿಯಂತೆ ನಡೆದಿದ್ದರೆ, ಈ ವೇಳೆಗೆ ಆರ್‌ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯ ಸೇರಿದಂತೆ 4 ಐಪಿಎಲ್ ಪಂದ್ಯಗಳು ನಡೆದಿರಬೇಕಿತ್ತು. ಆದರೆ ಪಾಕಿಸ್ತಾನದಿಂದ ನಿರಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದಾಗಿ ಮೇ 9 ರಂದು ಬಿಸಿಸಿಐ ಐಪಿಎಲ್ 2025 ಅನ್ನು ಒಂದು ವಾರ ಸ್ಥಗಿತಗೊಳಿಸಿತು. ಆದರೆ ಈಗ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಗಿದ್ದು, ಪಂದ್ಯಾವಳಿ ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ ಈ ಮಧ್ಯೆ, ಆರ್‌ಸಿಬಿ ಪಾಳಯದಿಂದ ಆಘಾತಕಾರಿ ಸಂಗತಿಯೊಂದು ಬಹಿರಂಗವಾಗಿದೆ. ವಾಸ್ತವವಾಗಿ, ಆರ್‌ಸಿಬಿ ಸೀಸನ್ನ ಮಧ್ಯದಲ್ಲಿ ತನ್ನ ನಾಯಕನನ್ನು ಬದಲಾಯಿಸುವ ಹಂತದಲ್ಲಿತ್ತು. ರಜತ್ ಪಾಟಿದಾರ್ ಇಂಜುರಿಯಾದ ಬಳಿಕ ಜಿತೇಶ್ ಶರ್ಮಾ ಅವರಿಗೆ ತಂಡದ ನಾಯಕತ್ವವನ್ನು ನೀಡಿತ್ತು. ಆದರೆ ಪಾಕಿಸ್ತಾನದ ದಾಳಿಯಿಂದಾಗಿ ಐಪಿಎಲ್ ಅನ್ನು ಸ್ಥಗಿತಗೊಳಿಸಿದರಿಂದ ನಿರ್ಧಾರವನ್ನು ಮುಂದೂಡಲಾಯಿತು. ಈ ವಿಚಾರವನ್ನು ಸ್ವತಃ ಜಿತೇಶ್ ಶರ್ಮಾ ಅವರೇ ಹೇಳಿಕೊಂಡಿದ್ದಾರೆ.
ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಜಿತೇಶ್
ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ತಂಡದ ಎಲ್ಲಾ ಸದಸ್ಯರು ಐಪಿಎಲ್ ಸ್ಥಗಿತಗೊಳ್ಳುವವರೆಗೂ ತಮ್ಮ ನೆನಪುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜಿತೇಶ್ ಶರ್ಮಾ, ‘ನನಗೆ ಆಡಳಿತ ಮಂಡಳಿಯಿಂದ ನಾಯಕತ್ವದ ಆಫರ್ ಸಿಕ್ಕಿದ್ದು ನನ್ನ ಅದೃಷ್ಟ. ನಾನು ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಳ್ಳುತ್ತೇನೆ ಎಂದು ಹೇಳಲಾಗಿತ್ತು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ವಿಷಯ. ಒಬ್ಬ ಆಟಗಾರ ಮತ್ತು ನಾಯಕನಾಗಿ, ನಾನು ತಂಡದ ಸಂಯೋಜನೆಯ ಬಗ್ಗೆ ಯೋಚಿಸುತ್ತಿದ್ದೆ. ನಾನು ಎರಡು-ಮೂರು ದಿನಗಳ ಕಾಲ ಕೋಚ್ ಮತ್ತು ಆಟಗಾರರೊಂದಿಗೆ ಮಾತನಾಡಿದ್ದೆ. ಬ್ಯಾಟಿಂಗ್ ಕ್ರಮಾಂಕ, ಪಾಯಿಂಟ್ ಟೇಬಲ್ ಮತ್ತು ಪ್ಲೇಆಫ್, ಈ ಎಲ್ಲಾ ವಿಷಯಗಳು ನನ್ನ ಮನಸ್ಸಿನಲ್ಲಿ ನಡೆಯುತ್ತಿದ್ದವು ಮತ್ತು ನಾನು ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ’ ಎಂದು ಹೇಳಿದ್ದಾರೆ.
ರಜತ್ ಪಾಟಿದರ್ಗೆ ಇಂಜುರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 9 ರಂದು ಏಕನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ 12 ನೇ ಪಂದ್ಯವನ್ನು ಆಡಬೇಕಿತ್ತು. ಈ ಪಂದ್ಯದಲ್ಲಿ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದರು. ವಾಸ್ತವವಾಗಿ, ಪ್ರಸ್ತುತ ಆರ್‌ಸಿಬಿ ನಾಯಕ ರಜತ್ ಪಟಿದಾರ್ ಗಾಯಗೊಂಡಿದ್ದರು. ಗಾಯದ ಕಾರಣ ಅವರು ಲಕ್ನೋ ವಿರುದ್ಧದ ಪಂದ್ಯಕ್ಕೆ ಗೈರಾಗಲಿದ್ದರು. ಅಂತಹ ಪರಿಸ್ಥಿತಿಯಲ್ಲಿ, ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅವಕಾಶವನ್ನು ಆಡಳಿತ ಮಂಡಳಿ ಜಿತೇಶ್‌ಗೆ ನೀಡಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ದಾಳಿಗಳಿಂದಾಗಿ ಐಪಿಎಲ್ ಅನ್ನು ಸ್ಥಗಿತಗೊಳಿಸಬೇಕಾಯಿತು. ಹೀಗಾಗಿ ಆರ್‌ಸಿಬಿ ತಂಡದ ನಾಯಕತ್ವವಹಿಸುವ ಅವಕಾಶ ಜಿತೇಶ್ ಕೈಯಿಂದ ಜಾರಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ