SRH vs RCB: 3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್

Updated on: May 22, 2026 | 8:52 PM

RCB's Costly Blunders: ಹೈದರಾಬಾದ್‌ನಲ್ಲಿ ನಡೆದ RCB vs SRH ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್‌ನ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಫೀಲ್ಡಿಂಗ್ ಇದಕ್ಕೆ ಪ್ರಮುಖ ಕಾರಣ. ಅಭಿಷೇಕ್ ಶರ್ಮಾ ಅವರ ಮೂರು ನಿರ್ಣಾಯಕ ಕ್ಯಾಚ್‌ಗಳನ್ನು ಆರ್‌ಸಿಬಿ ಫೀಲ್ಡರ್‌ಗಳು ಕೈಚೆಲ್ಲಿದ್ದರಿಂದ ಅವರು ಇದರ ಲಾಭ ಪಡೆದು ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಮೊದಲು ಬ್ಯಾಟಿಂಗ್‌ ಮಾಡಿತು. ಅದರಂತೆ ತಂಡದ ಆರಂಭಿಕರಾದ ಟ್ರಾವಿಡ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್​ಗೆ 45 ರನ್​ಗಳ ಜೊತೆಯಾಟ ನೀಡಿದರು. ಹೆಡ್ ವಿಕೆಟ್ ಪತನದೊಂದಿಗೆ ಇವರಿಬ್ಬರ ಜೊತೆಯಾಟ ಮುರಿದು ಬಿತ್ತು.

ಹೆಡ್ ವಿಕೆಟ್ ಪತನದ ಬೆನ್ನಲ್ಲೇ ಅಭಿಷೇಕ್ ಶರ್ಮಾ ಕೂಡ ಔಟಾಗುವುದರಲ್ಲಿದ್ದರು. ಆದರೆ ಆರ್​ಸಿಬಿ ಫೀಲ್ಡರ್​ಗಳ ಕಳಪೆ ಫೀಲ್ಡಿಂಗ್​ನಿಂದ ವಿಕೆಟ್ ಕೈತಪ್ಪಿತು. ಆರ್​ಸಿಬಿ ಅಭಿಷೇಕ್ ಅವರ ಒಟ್ಟು ಮೂರು ಕ್ಯಾಚ್​ಗಳನ್ನು ಕೈಚೆಲ್ಲಿತು. ಇದರ ಲಾಭ ಪಡೆದ ಅಭಿಷೇಕ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಮೊದಲಿಗೆ 6ನೇ ಓವರ್​ನಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ವೆಂಕಟೇಶ್ ಅಯ್ಯರ್ ಕ್ಯಾಚ್ ಬಿಟ್ಟರು. ನಂತರ 7ನೇ ಓವರ್​ನಲ್ಲಿ ಜೋರ್ಡಾನ್ ಕಾಕ್ಸ್ , ಅಭಿಷೇಕ್​ಗೆ 2ನೇ ಜೀವದಾನ ನೀಡಿದರು. 8ನೇ ಓವರ್​ನ ಮೊದಲ ಎಸೆತದಲ್ಲಿ ದೇವದತ್ ಪಡಿಕ್ಕಲ್ ಕೂಡ ಕ್ಯಾಚ್ ಡ್ರಾಪ್ ಮಾಡಿದರು. ಈ ಮೂರು ಜೀವದಾನಗಳ ಲಾಭ ಪಡೆದ ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಹತ್ತನೇ ಓವರ್‌ನಲ್ಲಿ ಸುಯಾಶ್‌ ಶರ್ಮಾಗೆ ಬಲಿಯಾದರು.

Follow Us
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More