ಬಿಎಸ್​ವೈ ಪಕ್ಷದ ಶಿಸ್ತಿನ ಸಿಪಾಯಿ, ವರಿಷ್ಠರು ಹೇಳಿದ ಹಾಗೆ ನಡೆದುಕೊಂಡಿದ್ದಾರೆ, ಅವರ ರಾಜೀನಾಮೆಯಿಂದ ಪಕ್ಷಕ್ಕೆ ಸಮಸ್ಯೆಯಾಗದು: ಆರ್ ಅಶೋಕ

ಬಿಎಸ್​ವೈ ಪಕ್ಷದ ಶಿಸ್ತಿನ ಸಿಪಾಯಿ, ವರಿಷ್ಠರು ಹೇಳಿದ ಹಾಗೆ ನಡೆದುಕೊಂಡಿದ್ದಾರೆ, ಅವರ ರಾಜೀನಾಮೆಯಿಂದ ಪಕ್ಷಕ್ಕೆ ಸಮಸ್ಯೆಯಾಗದು: ಆರ್ ಅಶೋಕ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 26, 2021 | 4:07 PM

ಯಡಿಯೂರಪ್ಪನವರು ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಅಶೋಕ, ಕೇಂದ್ರ ನಾಯಕರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಪಕ್ಷ ಮತ್ತು ರಾಜ್ಯದ ಹಿತದೃಷ್ಟಿಯಲ್ಲಿ ತೆಗೆದುಕೊಂಡಿರುತ್ತಾರೆ ಎಂದು ಅಶೋಕ ಹೇಳಿದರು.

ಬೆಂಗಳೂರು: ನಿರೀಕ್ಷೆಯಂತೆ, ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ತಮ್ಮ ಸಲ್ಲಿಸುತ್ತಿರುವ ನಿರ್ಧಾರ ಪ್ರಕಟಿಸಿದ ಕೂಡಲೇ, ಬಿಎಸ್​ವೈ ಸಂಪುಟದಲ್ಲಿ ಕಂದಾಯ ಸಚಿವರಾಗಿರುವ ಆರ್​ ಅಶೋಕ ಅವರೊಂದಿಗೆ ಟಿವಿ9 ಪ್ರತಿನಿಧಿ ಮಾತನಾಡಿ ಪ್ರತಿಕ್ರಿಯೆ ಪಡೆದರು.ಯಡಿಯೂರಪ್ಪನವರು ರಾಜೀನಾಮೆ ನೀಡುತ್ತಿರುವ ವಿಷಯ ಆಶ್ಚರ್ಯ ಹುಟ್ಟಿಸಿದೆಯಾದರೂ ಹೈಕಮಾಂಡ್​ ತೆಗೆದುಕೊಳ್ಳುವ ನಿರ್ಧಾರಕ್ಕೆ ಅವರು ಬದ್ಧರಾಗಿ ತಾನು ಪಕ್ಷದ ಶಿಸ್ತಿನ ಸಿಪಾಯಿ ಎನ್ನುವುದನ್ನು ಸಬೀತು ಮಾಡಿದ್ದಾರೆ ಎಂದು ಅಶೋಕ ಹೇಳಿದರು. ಅವರು ರಾಜೀನಾಮೆ ಸಲ್ಲಿಸಲಿರುವ ವಿಷಯ ಮೊದಲೇ ಗೊತ್ತಿತ್ತು ಎಂದು ಅವರು ಹೇಳಿದರು.

ಯಡಿಯೂರಪ್ಪನವರು ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಅಶೋಕ, ಕೇಂದ್ರ ನಾಯಕರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಪಕ್ಷ ಮತ್ತು ರಾಜ್ಯದ ಹಿತದೃಷ್ಟಿಯಲ್ಲಿ ತೆಗೆದುಕೊಂಡಿರುತ್ತಾರೆ. ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಬಿಎಸ್​ವೈ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ಬದ್ಧರಾಗಿದ್ದೇವೆ ಎಂದು ಹೇಳಿದರು.

ರಾಜೀನಾಮೆ ಸಲ್ಲಿಸುತ್ತಿರುವ ನಿರ್ಧಾರ ಪ್ರಕಟಿಸುವಾಗ ಯಡಿಯೂರಪ್ಪನವರು ಭಾವುಕರಾದ ಬಗ್ಗೆ ಅಶೋಕ ಅವರನ್ನು ಕೇಳಿದಾಗ, ಸುಮಾರು 40-50 ವರ್ಷಗಳಿಂದ ಅವರು ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅದರ ಏಳು-ಬೀಳುಗಳಿಗೆ ಸಾಕ್ಷಿಯಾಗಿದ್ದಾರೆ, ಹಾಗೆಯೇ ಪಕ್ಷ ಸಹ ಯಡಿಯೂರಪ್ಪನವರು ಪಟ್ಟಿರುವ ಶ್ರಮಕ್ಕೆ ಸೂಕ್ತ ಮತ್ತು ಅರ್ಹ ಮನ್ನಣೆ ನೀಡಿ ಗೌರವಿಸಿದೆ, ಎಂದು ಅಶೋಕ ಹೇಳಿದರು.

‘ಅವರಿಗೆ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸುವ ಅವಕಾಶ ನೀಡಿದೆ. ಅದನ್ನು ಬಿಎಸ್​ವೈ ಖುದ್ದು ಕೃತಜ್ಞತೆಯಿಂದ ನೆನೆದಿದ್ದಾರೆ. ಪಕ್ಷದ ವರಿಷ್ಠರು ಹೇಳಿದಂತೆ ನಡೆಯುವುದು ನಮ್ಮ ಧರ್ಮವಾಗಿದೆ. ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವುದು ರಾಜ್ಯದಲ್ಲಿ ಪಕ್ಷಕ್ಕೆ ಯಾವುದೇ ತೊಂದರೆಯಾಗದು,’ ಎಂದು ಕಂದಾಯ ಸಚಿವ ಹೇಳಿದರು.

ಇದನ್ನೂ ಓದಿ: BS Yediyurappa: ಪ್ರವಾಹ, ಕೋವಿಡ್ ಸಂಕಷ್ಟ, ಆಪರೇಷನ್ ಕಮಲ, ಜೈಲು ವಾಸ; ಸವಾಲುಗಳನ್ನು ಮೆಟ್ಟಿ ನಿಂತ ಛಲಗಾರ ಯಡಿಯೂರಪ್ಪ

Published on: Jul 26, 2021 04:05 PM