ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ ಸ್ವಾಧೀನ ಅಧಿಕಾರಿ ಉಮೇಶ್ ಬೆಂಗಳೂರಿನಲ್ಲಿಅರೆಸ್ಟ್

ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ ಸ್ವಾಧೀನ ಅಧಿಕಾರಿ ಉಮೇಶ್ ಬೆಂಗಳೂರಿನಲ್ಲಿಅರೆಸ್ಟ್

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on:Aug 25, 2023 | 10:42 AM

ಚಿಕ್ಕಮಗಳೂರು: ಕಂದಾಯ ಭೂಮಿ ಕಬ್ಜಾ ಮಾಡಿರುವ ಅತಿಕ್ರಮಣ ಪ್ರಕರಣಗಳು ಹೆಚ್ಚಾಗಿ ನಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರವಾರ ಸೀಬರ್ಡ್ ನೌಕಾನೆಲೆಯ ಭೂ ಸ್ವಾಧೀನ ಅಧಿಕಾರಿ ಉಮೇಶ್ ಎಂಬಾತನನ್ನು ನಿನ್ನೆ ಗುರುವಾರ ತಡರಾತ್ರಿ ಕಡೂರು ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಯುವ ಅಧಿಕಾರಿ ಉಮೇಶ್ ಈ ಹಿಂದೆ ಮೋಜು ಮಸ್ತಿ ನಡೆಸುತ್ತಿರುವ ವಿಡಿಯೋ ಇಲ್ಲಿದೆ

ಚಿಕ್ಕಮಗಳೂರು, ಆಗಸ್ಟ್​ 25: ರಾಜ್ಯದಲ್ಲೇ ಅತಿ ಪ್ರಮಾಣದಲ್ಲಿ ಸರ್ಕಾರದ ಕಂದಾಯ ಭೂಮಿಯನ್ನು ಕಬ್ಜಾ ಮಾಡಿರುವ ಅತಿಕ್ರಮಣ ಪ್ರಕರಣಗಳು (Revenue Land Scam) ನಡೆದಿರುವ ಮಲೆನಾಡಿನ ಭಾಗವಾದ ಚಿಕ್ಕಮಗಳೂರು (Chikkamagalur) ಜಿಲ್ಲೆಯಲ್ಲಿ. ಅಲ್ಲೀಗ, ಸರ್ಕಾರದ ಆದೇಶದ ಮೇರೆಗೆ ತಹಸೀಲ್ದಾರುಗಳು ತಂಡೋಪಾದಿಯಲ್ಲಿ ಭೂ ಅತಿಕ್ರಮಣ, ಒತ್ತುವರಿದಾರರ ಬುಡಕ್ಕೆ ನೀರುಬಿಡುತ್ತಿದ್ದಾರೆ. ಇಂತಹುದೇ ಒಂದು ಕಂದಾಯ ಭೂಮಿ ಹಗರಣ ಪ್ರಕರಣದಲ್ಲಿ ಕಾರವಾರ ಸೀಬರ್ಡ್ ನೌಕಾನೆಲೆಯ ಭೂ ಸ್ವಾಧೀನ ಅಧಿಕಾರಿ ಉಮೇಶ್ ಎಂಬಾತನನ್ನು ನಿನ್ನೆ ಗುರುವಾರ ತಡರಾತ್ರಿ ಕಡೂರು ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ (Arrest, Bengaluru). ಪೊಲೀಸರು ನಿಗೂಢ ಸ್ಥಳದಲ್ಲಿ ಉಮೇಶ್ ವಿಚಾರಣೆ ನಡೆಸುತ್ತಿದ್ದಾರೆ.

ಉಮೇಶ್ ಈ ಹಿಂದೆ ಕಡೂರು ತಾಲೂಕಿನ ತಹಶಿಲ್ದಾರ್ ಆಗಿದ್ದರು. ಕಂದಾಯ ಭೂಮಿ ಪರಭಾರೆ ಹಗರಣದಲ್ಲಿ ಭಾಗಿ ಹಿನ್ನೆಲೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಮೇಶ್ ವಿರುದ್ಧ ದೂರು ದಾಖಲಾಗಿತ್ತು. ಜಿಲ್ಲಾಡಳಿತ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಸರ್ಕಾರ ಇತ್ತೀಚೆಗೆ 15 ತಹಶಿಲ್ದಾರುಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿತ್ತು. ಕಡೂರು ತಾಲೂಕಿನಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖಾ ತಂಡ ವರದಿ ಸಲ್ಲಿಸಿತ್ತು.

ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂದಾಯ ಭೂಮಿ ಹಗರಣ -60 ರೆವೆನ್ಯೂ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆ

ಕಡೂರು ತಾಲೂಕಿನಲ್ಲೇ ಮೂರು ಸಾವಿರ ಎಕರೆ ಕಂದಾಯ ಭೂಮಿ ಗುಳುಂ ಆಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನ ಪ್ರಭಾವಿಗಳಿಗೆ ಪರಭಾರೆ ಮಾಡಿರುವುದು ಮೆಲ್ನೋಟಕ್ಕೆ ದೃಢಪಟ್ಟಿದೆ. ಉಮೇಶ್​​ ಈ ಹಿಂದೆ ಕಡೂರು ತಹಶಿಲ್ದಾರ್ ಆಗಿದ್ದ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಕಂದಾಯ ಭೂಮಿ ಪರಭಾರೆ ಮಾಡಿದ್ದಾರೆ ಎನ್ನಲಾಗಿದೆ.

ಚಿಕ್ಕಮಗಳೂರು ಕಂದಾಯ ಭೂ ಹಗರಣ: ಇನ್ನೂ ಹಲವು ಕಂದಾಯ ಅಧಿಕಾರಿಗಳ ಬಂಧನ ಸಾಧ್ಯತೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಉಳ್ಳಿನಾಗರ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಪ್ರಕರಣದಲ್ಲಿ ಕಾರವಾರ ಸೀಬರ್ಡ್ ನೌಕಾನೆಲೆಯ ಭೂಸ್ವಾಧೀನ ಅಧಿಕಾರಿ ಬಂಧನವಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದ ಮೂವರು ತಹಶೀಲ್ದಾರ್ ಉಮೇಶ್, ನಿವೃತ್ತ ಶಿರಸ್ತೇದಾರ್ ನಂಜುಂಡಯ್ಯ ಮತ್ತು ಆರ್​​ಐ ಕಿರಣ್ ಕುಮಾರ್ ವಿರುದ್ಧ ಭೂಕಂದಾಯ ಕಾಯ್ದೆ 1964ರ ಕಲಂ 192‌A(2) ಸೆಕ್ಷನ್ ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಕಡೂರು ತಾಲೂಕಿನಲ್ಲೇ 3 ಸಾವಿರ ಎಕರೆ ಕಂದಾಯ ಭೂಮಿ ಕಬಳಿಕೆಯಾಗಿದ್ದು, ಕಡೂರು ತಾಲೂಕಿನ ಇನ್ನೂ ಹಲವು ಕಂದಾಯ ಅಧಿಕಾರಿಗಳ ಬಂಧನ ಸಾಧ್ಯತೆಯಿದೆ.

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 25, 2023 10:17 AM