AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​ ಕರ್ಫ್ಯೂ, ಲಾಕ್​ಡೌನ್​ಗೆ ಆಡಳಿತಾರೂಢ ಬಿಜೆಪಿಗರಿಂದಲೇ ವಿರೋಧ!

ವೀಕೆಂಡ್​ ಕರ್ಫ್ಯೂ, ಲಾಕ್​ಡೌನ್​ಗೆ ಆಡಳಿತಾರೂಢ ಬಿಜೆಪಿಗರಿಂದಲೇ ವಿರೋಧ!

TV9 Web
| Updated By: ಆಯೇಷಾ ಬಾನು|

Updated on: Jan 19, 2022 | 8:48 AM

Share

ಕ್ಷಣಕ್ಕೊಂದು ಲೆಕ್ಕ.. ದಿನಕ್ಕೊಂದು ಸೂತ್ರ. ಸರ್ಕಾರದ ನಡೆ ಯಾವಾಗ ಬದಲಾಗುತ್ತೋ.. ಯಾವ ರೂಲ್ಸ್​ ಅದ್ಯಾವಾಗ ಚೇಂಜ್ ಆಗ್ತವೋ ಹೇಳೋಕಾಗ್ತಿಲ್ಲ.. ಯಾಕಂದ್ರೆ, ರೂಲ್ಸ್​​ ಮೇಲೆ ರೂಲ್ಸ್​​​ ಮಾಡ್ತಿದ್ದ ಸರ್ಕಾರದ ಲೆಕ್ಕಾಚಾರ ಬದಲಾದಂತೆ ಕಾಣ್ತಿದೆ.. ಶುಕ್ರವಾರ ಅಚ್ಚರಿಯ ನಿರ್ಧಾರ ಹೊರಬೀಳುವ ಸಾಧ್ಯತೆ ದಟ್ಟವಾಗ್ತಿದೆ.

ಸರ್ಕಾರದ ಖಡಕ್ ರೂಲ್ಸ್‌ನಿಂದ ಜನ ಮನೆ ಬಿಟ್ಟು ಬರ್ತಿಲ್ಲ. ವೀಕೆಂಡ್ ಕರ್ಫ್ಯೂ ಇರೋದ್ರಿಂದ ಎಲ್ಲವೂ ಬಂದ್ ಆಗಿರುತ್ತೆ. ಮಾಲ್, ಥಿಯೇಟರ್ ಹೋಟೆಲ್, ಪಬ್, ಬಾರ್ ರೆಸ್ಟೋರೆಂಟ್ ಎಲ್ಲವೂ ಕ್ಲೋಸ್ ಆಗಿರುತ್ತೆ. ಸರ್ಕಾರವೇನೋ ಕೊರೊನಾ ಕಟ್ಟಿಹಾಕೋದಕ್ಕೆ ಖಡಕ್ ರೂಲ್ಸ್ ತಂದಿದ್ದೇವೆ ಅಂತಾ ಹೇಳಿಕೊಳ್ತಿದೆ. ಆದ್ರೆ, ಇದೇ ಖಡಕ್ ರೂಲ್ಸ್‌ಗೀಗ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗ್ತಿದೆ.

ಉದ್ಯಮಿಗಳು, ವರ್ತಕರು, ಹೋಟೆಲ್ ಮಾಲೀಕರು, ಪಬ್ ಮಾಲೀಕರು, ಬಾರ್‌ ಆ್ಯಂಡ್ ರೆಸ್ಟೋರೆಂಟ್ ಓನರ್‌ಗಳು, ಬೀದಿ ಬದಿ ವ್ಯಾಪಾರಿಗಳು, ಜಿಮ್ ಮಾಲೀಕರು, ಮೊಬೈಲ್ ರೀಟೈಲರ್ಸ್ ಸೇರಿದಂತೆ ಎಲ್ಲರದ್ದೂ ಒಂದೇ ಕೂಗು ವೀಕೆಂಡ್ ಕರ್ಫ್ಯೂ ಹಿಂಪಡೀರಿ. ವೀಕೆಂಡ್ ಕರ್ಫ್ಯೂ ವೇಳೆ ವ್ಯಾಪಾರ ವಹಿವಾಟಿಗೆ ಅವಕಾಶ ಕೊಡಿ ಅನ್ನೋದು.. ಇದಕ್ಕೆ ಕಾರಣವನ್ನ ಕೊಡ್ತಿರೋ ಉದ್ಯಮಿಗಳು, ಆರೋಗ್ಯ ಸೌಕರ್ಯಗಳು ಇಲ್ಲದಿದ್ದಾಗ ರೂಲ್ಸ್ ಜಾರಿ ಮಾಡೋದು ಸರಿ. ಆದ್ರೆ, ಮೊದಲ ಅಲೆ, ಎರಡನೇ ಅಲೆಯಲ್ಲಿ ಪಾಠ ಕಲಿತು. ಆರೋಗ್ಯ ಸೌಕರ್ಯಗಳು ಇದ್ರೂ, ಮತ್ತೆ ಕಟ್ಟುಪಾಡುಗಳೇಕೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

‘ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯದಿದ್ರೆ GST ಕಟ್ಟಲ್ಲ’
ಕೊರೊನಾ ರೂಲ್ಸ್‌ಗಳಿಂದಾಗಿ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ ಅಂತಾ ಹೋಟೆಲ್ ಮಾಲೀಕರಂತೂ ರೊಚ್ಚಿಗೆದ್ದಿದ್ದಾರೆ. ನಾಳೆ ಆರೋಗ್ಯ ಸಚಿವ ಸುಧಾಕರರನ್ನ ಮೀಟ್ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳೋದಕ್ಕೂ ಸಿದ್ಧರಾಗಿದ್ದಾರೆ. ಒಂದ್ವೇಳೆ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯದಿದ್ರೆ, ಬೀದಿಗಿಳಿತೀವಿ, GST ಕಟ್ಟಲ್ಲ ಅಂತಾ ಸೆಡ್ಡು ಹೊಡೆದಿದ್ದಾರೆ. ವೀಕೆಂಡ್‌ನಲ್ಲೂ ಹೋಟೆಲ್ ತೆರೆಯಲು ಅವಕಾಶ ಮಾಡಿಕೊಡಿ ಅಂತಾ ಹೇಳ್ತಿದ್ದಾರೆ.

ನಡೆಯಬೇಕಿದ್ದ ಉದ್ಯಮಿಗಳ ಸಭೆ ರದ್ದು
ಹೋಟೆಲ್, ಪಬ್ ಮಾಲೀಕರು ಸೇರಿದಂತೆ 10 ಕ್ಕೂ ಹೆಚ್ಚು ಸಂಘಟನೆಗಳು ನಾಳೆ ಸಭೆ ಸೇರಲು ನಿರ್ಧರಿಸಿದ್ದವು. ಸಭೆ ನಡೆಸಿ, ವೀಕೆಂಡ್ ಕರ್ಫ್ಯೂ ಹಿಂಪಡೆಯುವಂತೆ ಸಿಎಂಗೆ ಮನವಿ ಮಾಡಲು ತೀರ್ಮಾನಿಸಿದ್ರು. ಆದ್ರೆ, ನಾಳಿನ ಸಭೆ ರದ್ದು ಮಾಡಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ರನ್ನ ನಾಳೆ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಸುಧಾಕರ್‌ಗೆ ಮನವಿ ಸಲ್ಲಿಸಿ, ಶುಕ್ರವಾರದವರೆಗೂ ಕಾದು ನೋಡಲು ತೀರ್ಮಾನಿಸಿರೋ ಹೋಟೆಲ್ ಮಾಲೀಕರು, ವೀಕೆಂಡ್ ಕರ್ಫ್ಯೂ ಹಿಂಪಡೆಯಬಹುದು ಅನ್ನೋ ಭರವಸೆಯಲ್ಲಿದ್ದಾರೆ. ಒಂದ್ವೇಳೆ ಕರ್ಫ್ಯೂ ಕೈಬಿಡದಿದ್ರೆ, ಮುಂದಿನ ತೀರ್ಮಾನ ತೆಗೆದುಕೊಳ್ಳಲು ಎಲ್ಲಾ ವರ್ತಕರು, ಉದ್ಯಮಿಗಳು ಸಜ್ಜಾಗಿದ್ದಾರೆ.

ಕರ್ಫ್ಯೂ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ
ರಾಜ್ಯಾದ್ಯಂತ ವಿರೋಧ ವ್ಯಕ್ತವಾಗ್ತಿರೋ ಬೆನ್ನಲ್ಲೇ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ಸರ್ಕಾರದ ವಿರುದ್ದ ಕೆರಳಿದ್ರು. ನೈಟ್ ಕರ್ಫ್ಯೂ ಜಾರಿಯಿಂದ ರಾಜ್ಯದ ಜನರಿಗೆ ಸಂಕಷ್ಟವಾಗ್ತಿದೆ. ನೈಟ್ ಕರ್ಫ್ಯೂ ಮುಂದುವರಿಸುವುದಾದರೆ ಸಹಾಯ ಮಾಡಿ ಅಂತಾ ಆಗ್ರಹಿಸಿದ್ರು.

ಶುಕ್ರವಾರ ಜನರಿಗೆ ಗುಡ್ನ್ಯೂಸ್ ಸಿಗುತ್ತಾ?
ವೀಕೆಂಡ್‌ ಕರ್ಫ್ಯೂಗೆ ವ್ಯಾಪಕ ವಿರೋಧ ವ್ಯಕ್ತವಾಗ್ತಿರೋದ್ರಿಂದ ಶುಕ್ರವಾರದ ಸಭೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದೇ ಶುಕ್ರವಾರ ಸಿಎಂ ನೇತೃತ್ವದಲ್ಲಿ ಕೊರೊನಾ ವಿಚಾರವಾಗಿ ಮಹತ್ವದ ಸಭೆ ನಡೆಯಲಿದೆ. ಈ ವೇಳೆ ವೀಕೆಂಡ್, ನೈಟ್ ಕರ್ಫ್ಯೂ ಸೇರಿದಂತೆ ಈಗಿರೋ ರೂಲ್ಸ್ಗಳ ಬಗ್ಗೆ ಚರ್ಚೆಯಾಗಲಿದೆ. ಕಠಿಣ ನಿಯಮಗಳನ್ನ ಕಂಟಿನ್ಯೂ ಮಾಡಬೇಕಾ. ಇಲ್ಲಾ ಜನತೆಗೆ ರಿಲೀಫ್ ನೀಡಬೇಕಾ ಅನ್ನೋ ಬಗ್ಗೆ ನಿರ್ಧಾರವಾಗಲಿದೆ. ತಜ್ಞರು, ಅಧಿಕಾರಿಗಳ ಜೊತೆ ಚರ್ಚಿಸಿ ಸಿಎಂ ಬೊಮ್ಮಾಯಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಕರ್ಫ್ಯೂ ಕೈಬಿಡುವಂತೆ ಒತ್ತಡ ಹೆಚ್ಚಾಗ್ತಿದ್ದು, ಪಾಸಿಟಿವಿಟಿ ರೇಟ್ ನೋಡಿಕೊಂಡು ನಿರ್ಧಾರಕ್ಕೆ ಬರಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರದಿಂದ ಜಾರಿಯಾಗುವಂತೆ ನಿಯಮಗಳು ಬದಲಾವಣೆಯಾಗೋ ಸಾಧ್ಯತೆ ಇದೆ. ಎರಡ್ಮೂರು ದಿನದ ಪಾಸಿಟಿವಿಟಿ ರೇಟ್‌ ಮೇಲೆ ವೀಕೆಂಡ್ ಕರ್ಫ್ಯೂ ಭವಿಷ್ಯ ನಿಂತಿದೆ.